ಮಂಡ್ಯ: ಹಳೆ ಮೈಸೂರು ಭಾಗದ ಜೀವನಾಡಿ ಕೆಆರ್‌ಎಸ್ ಡ್ಯಾಂ ದಶಕದ ಬಳಿಕ ಅಕ್ಟೋಬರ್ ಅಂತ್ಯದಲ್ಲಿ ಬಹುತೇಕ ತುಂಬಿದೆ.
ಸಾಮಾನ್ಯವಾಗಿ ಜುಲೈ ಅಥವಾ ಆಗಸ್ಟ್ನಲ್ಲಿ ಡ್ಯಾಂ ಭರ್ತಿಯಾಗುತ್ತಿತ್ತು. ಆದ್ರೆ ನಿರೀಕ್ಷಿತ ಪ್ರಮಾಣದಲ್ಲಿ ಮುಂಗಾರು ಮಳೆ ಸುರಿಯದ ಹಿನ್ನೆಲೆಯಲ್ಲಿ ಈ ವರ್ಷ ಅಣೆಕಟ್ಟು ಭರ್ತಿಯಾಗಿರಲಿಲ್ಲ. 2009ರ ಅಕ್ಟೋಬರ್ 28 ರಂದು ಡ್ಯಾಂ ತುಂಬಿತ್ತು.
ಡ್ಯಾಂ ತುಂಬಲು ಕಾಲು ಅಡಿ ಮಾತ್ರ ಬಾಕಿ:
ಡ್ಯಾಂ ಭರ್ತಿಯಾಗದಿರೋದ್ರಿಂದ ರೈತರು ಆತಂಕದಲ್ಲಿದ್ದರು. ಬೆಂಗಳೂರಿಗೂ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಭೀತಿ ಶುರುವಾಗಿತ್ತು. ಆದರೆ ಮುಂಗಾರು ಅಂತ್ಯದಲ್ಲಿ ಮಳೆ ಬಿರುಸು ಪಡೆದುಕೊಂಡ ಪರಿಣಾಮ ನೀರಿನ ಒಳ ಹರಿವು ಹೆಚ್ಚಳವಾಗಿ 124.80 ಅಡಿ ಗರಿಷ್ಠ ಮಟ್ಟದಲ್ಲಿದ್ದ ಡ್ಯಾಂ, ಇಂದು 124.50 ಅಡಿಗೆ ತಲುಪಿದೆ. ಸಂಪೂರ್ಣವಾಗಿ ಅಣೆಕಟ್ಟೆ ಭರ್ತಿಯಾಗಲು ಕೇವಲ 0.30 ಅಡಿ ಅಷ್ಟೇ ಬಾಕಿ ಇದೆ.
ಫಲಿಸಿದ ಬಸವರಾಜ ಬೊಮ್ಮಾಯಿ ಪೂಜೆ :
ಜಲಾಶಯ ಭರ್ತಿಯಾಗದ ಹಿನ್ನೆಲೆಯಲ್ಲಿ ಅಕ್ಟೋಬರ್ 7ರಂದು ಸಿಎಂ ಬಸವರಾಜ ಬೊಮ್ಮಾಯಿ ಖ್ಯಾತ ಜ್ಯೋತಿಷಿ ಡಾ.ಭಾನುಪ್ರಕಾಶ್ ಶರ್ಮ ನೇತೃತ್ವದಲ್ಲಿ ಪರ್ಜನ್ಯ ಹೋಮ ಹಾಗೂ ವಿಶೇಷ ಪೂಜೆ ನಡೆಸಿದ್ದರು. ಈ ವೇಳೆ ಸಿಎಂ ಜೊತೆ ಸಚಿವ ನಾರಾಯಣಗೌಡ ಸಹ ಪಾಲ್ಗೊಂಡಿದ್ದರು. ಈ ವಿಶೇಷ ಪೂಜೆ ಬಳಿಕ ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗಿದೆ.
ಇಂದಿನ ನೀರಿನ ಮಟ್ಟ:
ಜಲಾಶಯ ಭರ್ತಿಯಾಗಲು ಕೇವಲ ಕಾಲು ಅಡಿ ಬಾಕಿ ಇದೆ. ಜಲಾಶಯದ ನೀರಿನ ಗರಿಷ್ಠ ಮಟ್ಟ 124.80 ಅಡಿಗಳಿದ್ದು, ಜಲಾಶಯದ ಇಂದಿನ ನೀರಿನ ಮಟ್ಟ 124.30 ಅಡಿ ಇದೆ. ಸದ್ಯಕ್ಕೆ ಡ್ಯಾಂಗೆ 11,345 ಕ್ಯೂಸೆಕ್ ಒಳ ಹರಿವು ಬರುತ್ತಿದ್ದು, ಡ್ಯಾಂನಿಂದ 3,608 ಕ್ಯೂಸೆಕ್ ನೀರು ಬಿಡುಗಡೆ ಮಾಡಿದ್ದಾರೆ. ಜಲಾಶಯದಲ್ಲಿ ಒಟ್ಟು 49.452 ಟಿಎಂಸಿ ನೀರಿನ ಶೇಖರಣಾ ಸಾಮರ್ಥ್ಯವಿದ್ದು, ಸದ್ಯಕ್ಕೆ 49.033 ಟಿಎಂಸಿ ನೀರು ಶೇಖರಣೆಯಾಗಿದೆ.
ಮುಂದಿನ ವಾರ ಸಿಎಂ ಬೊಮ್ಮಾಯಿ ಬಾಗಿನ:
ಸದ್ಯಕ್ಕೆ ಉಪ ಚುನಾವಣೆಯಲ್ಲಿ ಬ್ಯುಸಿಯಾಗಿರುವ ಬಸವರಾಜ ಬೊಮ್ಮಾಯಿ ಉಪ ಚುನಾವಣೆ ಮುಗಿದ ಬಳಿಕ ಡ್ಯಾಂಗೆ ಸಂಪ್ರದಾಯದಂತೆ ಬಾಗಿನ ಸಮರ್ಪಣೆ ಮಾಡಲಿದ್ದಾರೆ.