ಮಂಡ್ಯ: ಅಕ್ರಮ ಗಣಿ ಚಟುವಟಿಕೆಗೆ ಬೆಂಬಲವಾಗಿ ನಿಂತಿದ್ದರೆಂಬ ಆರೋಪ ಎದುರಿಸುತ್ತಿರುವ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ವಿಜ್ಞಾನಿಯಾಗಿದ್ದ ಟಿ.ವಿ.ಪುಷ್ಪಾ ಅವರ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಲಾಗಿದೆ.
ಹಿರಿಯ ಭೂ ವಿಜ್ಞಾನಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಅವಧಿಯಲ್ಲಿ ಟಿ.ವಿ.ಪುಷ್ಪಾ ವಿರುದ್ಧ ಕೇಳಿ ಬಂದಿರುವ ಆರೋಪಗಳ ಕುರಿತು ಸಮಗ್ರ ತನಿಖೆ ನಡೆಸುವಂತೆ ಮೈಸೂರಿನ ಎಸಿಬಿ ಆರಕ್ಷಕ ಅಧೀಕ್ಷಕರಿಗೆ ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷ ತ್ಯಾಗರಾಜು ದೂರು ನೀಡಿದ್ದಾರೆ.
ನಾಗಮಂಗಲ ತಾಲೂಕಿನ ಕಸುವಿನ ಕಟ್ಟೆ ಗ್ರಾಮದ ಮೆ.ಲಕ್ಷ್ಮೀ ವೆಂಕಟೇಶ್ವರ ಸ್ಟೋನ್ ಕ್ರಷರ್‌ನ ಎಂ.ಸೂರಜ್ ಕಾನೂನು ಬದ್ಧವಾಗಿ ಕ್ರಷರ್ ಸ್ಥಾಪಿಸದಿದ್ದರೂ, ಫಾರಂ-ಸಿ ನೀಡಿದ್ದಾರೆ. ಕ್ರಷರ್ ಸ್ಥಳದಲ್ಲಿ ಬಂಕರ್ ನಿರ್ಮಾಣಗೊಂಡಿರುವುದನ್ನು ಹೊರತುಪಡಿಸಿದರೆ ಕ್ರಷರ್ ಘಟಕ ಸ್ಥಾಪನೆ ಸಂಬಂಧ ಯಾವುದೇ ಯಂತ್ರೋಪಕರಣಗಳನ್ನು ಅಳವಡಿಸಿರುವುದು ಕಂಡುಬಂದಿಲ್ಲ. ಕ್ರಷರ್ ಘಟಕಕ್ಕೆ ನೀಡಿರುವ 1.38 ಎಕರೆ ಪ್ರದೇಶವು ಜಿಲ್ಲಾಧಿಕಾರಿಗಳು 26.11.2020ರಲ್ಲಿ ಮಾಡಿರುವ ಆದೇಶದಂತೆ ಇಂಡಸ್ಟ್ರಿಯಲ್ ಕ್ರಷರ್ ಉದ್ದೇಶಕ್ಕಾಗಿ ಭೂ ಪರಿವರ್ತನೆಯಾಗಿದೆ. ಇದಕ್ಕೆ 21.12. 2020ರಲ್ಲಿ ಪರಿಸರ ಮಾಲಿನ್ಯ ನಿಯಂತ್ರಣ ಮ೦ಡಳಿಯವರಿ೦ದ ಸಿಎಫ್‌ಒ ಪಡೆದಿರುವುದು ಕಂಡುಬಂದಿದೆ ಎಂದು ಹೇಳಿದ್ದಾರೆ.
ಕ್ರಷರ್ ಘಟಕ ಸ್ಥಾಪನೆಗಾಗಿ ಪ್ರಸ್ತುತ ಸಿ -ಫಾರಂ ನೀಡಿರುವ ಪ್ರದೇಶದಲ್ಲಿ ಬಂಕರ್ ಸ್ಥಾಪಿಸಿರುವುದು ಕಂಡುಬಂದಿದೆ. ಸ್ಥಳದಲ್ಲಿ ಕ್ರಷರ್ ಘಟಕ ಸ್ಥಾಪನೆ ಸಂಬಂಧ ಯಾವುದೇ ಯಂತ್ರೋಪಕರಣಗಳಿರುವುದು ಕಂಡುಬಂದಿಲ್ಲ. ಕರ್ನಾಟಕ ಕಲ್ಲುಪುಡಿ ಮಾಡುವ ಘಟಕಗಳ ನಿಯಂತ್ರಣ (ತಿದ್ದುಪಡಿ) ಅಧಿನಿಯಮ- 2013 ರ ಸೆಕ್ಷನ್ 6 ಎ ಲೈಸೆನ್ಸ್ ನೀಡುವುದಕ್ಕಾಗಿ ವಿಧಿಸಿರುವ ಷರತ್ತುಗಳನ್ನು ಪೂರೈಸಿಲ್ಲದಿರುವುದರಿಂದ ಹಾಗೂ ಕ್ರಷರ್ ಘಟಕ ಸ್ಥಾಪಿಸದೆ ಇರುವುದು ಕಾನೂನು ಬಾಹಿರವಾಗಿದೆ ಎಂದು ಪಾಂಡವಪುರ ಎಸಿ ಮತ್ತು ನಾಗಮಂಗಲ ತಹಶೀಲ್ದಾರ್ ನೀಡಿರುವ ವರದಿಯಿಂದ ಸಾಬೀತಾಗಿದೆ.
ಟಿ.ವಿ.ಪುಷ್ಪಾ ಅವರು ತಮ್ಮ ಅವಧಿಯಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿರುವುದು ಗೊತ್ತಿದ್ದರೂ ಸಂಬಂಧಿಸಿದವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಜಿಲ್ಲೆಯಲ್ಲಿ ದಿಲೀಪ್ ಬಿಲ್ಡ್‌ಕಾನ್ ಸಂಸ್ಥೆಯವರು ಅಕ್ರಮ ಗಣಿಗಾರಿಕೆ ನಡೆಸಿ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂ.ನಷ್ಟ ಉಂಟುಮಾಡಿದ್ದಾರೆ. ಈ ವಿಷಯವನ್ನು ಟಿ.ವಿ.ಪುಷ್ಪಾ ಅವರ ಗಮನಕ್ಕೆ ತಂದಾಗ ಕಣ್ಮರೆಸುವ ತಂತ್ರವಾಗಿ ಅಕ್ರಮ ಗಣಿಗಾರಿಕೆ ನಡೆಸುತ್ತಿರುವವರಿಗೆ ಕೇವಲ ನೋಟಿಸ್ ನೀಡಿ, ನಂತರ ಅಕ್ರಮ ಗಣಿಗಾರಿಕೆ ಪರಿಮಾಣವನ್ನು 1,38,051 ಮೆಟ್ರಿಕ್ ಟನ್ ಎಂದು ಕಡಿಮೆ ಅಂದಾಜು ಮಾಡಿದ್ದಾರೆ ಎಂದು ದೂರಿನಲ್ಲಿ ದಾಖಲಿಸಿದ್ದಾರೆ.
ಮಂತ್ರಿಗಳು, ಇಲಾಖಾ ಮುಖ್ಯಸ್ಥರು ಹಾಗೂ ಇತರೆ ಹಿರಿಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದಾಗ ಪುಷ್ಪಾ ಮಾಡಿರುವ ಅಂದಾಜು ಪರಿಮಾಣ ಸಂಶಯಾಸ್ಪದವೆಂದು ಕಂಡುಬಂದ ಕಾರಣ ಜಿಲ್ಲಾಡಳಿತದಿಂದ ಮತ್ತೊಮ್ಮೆ ಹೊಸ ಸರ್ವೇ ಕಾರ್ಯ ನಡೆಸಲು ಸೂಚಿಸಲಾಯಿತು. ಹೊಸದಾಗಿ ಹಲವು ಇಲಾಖೆಗಳು ಸೇರಿ ಜಂಟಿ ಸರ್ವೇ ನಡೆಸಿದಾಗ ಸುಮಾರು 4,07,380 ಮೆಟ್ರಿಕ್ ಟನ್ (ಹಿಂದೆ ಅಂದಾಜಿಸಿದಕ್ಕಿಂತ ನಾಲ್ಕು ಪಟ್ಟು ಹೆಚ್ಚು) ಅಕ್ರಮ ಗಣಿಗಾರಿಕೆ ನಡೆದಿರುವುದು ಕಂಡುಬಂದಿದೆ ಎಂದು ತಿಳಿಸಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸಿ. ನಾರಾಯಣಗೌಡ, ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಅವರಿಗೆ ಪತ್ರ ಬರೆದು ಗಣಿ ಅಧಿಕಾರಿ ಟಿ.ವಿ.ಪುಷ್ಪಾ ವಿರುದ್ಧ ಮಾಡಲಾಗಿರುವ ಆರೋಪಗಳ ಕುರಿತು ತನಿಖೆ ನಡೆಸಿ ಕ್ರಮ ಕೈಗೊಳ್ಳಲು ತ್ಯಾಗರಾಜು ಕೋರಿದ್ದಾರೆ.