ಮಂಡ್ಯ: ಕೃಷಿ ಜೊತೆಗೆ ವಕೀಲ ವೃತ್ತಿಯನ್ನೂ ಮಾಡ್ತಿದ್ದ ವ್ಯಕ್ತಿಯ ಶವ ನದಿಯಲ್ಲಿ ಪತ್ತೆಯಾಗಿದ್ದು, ಕೊಲೆ ಮಾಡಲಾಗಿದೆ ಎಂದು ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಆರೋಪಿಸಿದ್ದಾರೆ.
ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ನವಿಲೆ ಗ್ರಾಮದ ರವೀಂದ್ರ (48) ಮೃತಪಟ್ಟವರು. ಇವರನ್ನು ಹತ್ಯೆಗೈದಿರುವ ದುಷ್ಕರ್ಮಿಗಳು ಬಳಿಕ ಶಿಂಷಾ ನದಿಯಲ್ಲಿ ಮೃತದೇಹವನ್ನು ಮುಳುಗಿಸಿ ಮೇಲೆ ಬರದಂತೆ ದೊಡ್ಡ ಗಾತ್ರದ ಕಲ್ಲನ್ನಿಟ್ಟು ಪರಾರಿಯಾಗಿದ್ದಾರೆ ಎಂದು ಹೇಳಲಾಗ್ತಿದೆ.
ವಕೀಲ ರವೀಂದ್ರ ಎಂದಿನಂತೆ ನಿನ್ನೆ ಮೇಕೆ ಹಾಗೂ ಹಸುಗಳಿಗೆ ಮೇವು ತರಲು ಗ್ರಾಮದ ಹೊರ ವಲಯದಲ್ಲಿರುವ ತಮ್ಮ ಜಮೀನಿಗೆ ತೆರಳಿದ್ದಾರೆ. ಬೆಳಗ್ಗೆಯೇ ತೆರಳಿದ್ದ ರವೀಂದ್ರ ಸಂಜೆಯಾದ್ರೂ ಮನೆಗೆ ಹಿಂತಿರುಗದ ಕಾರಣ ಅನುಮಾನಗೊಂಡ ಕುಟುಂಬಸ್ಥರು ಹುಡುಕಿಕೊಂಡು ತಮ್ಮ ಜಮೀನು ಪಕ್ಕದ ಶಿಂಷಾ ನದಿ ಬಳಿಗೆ ಬಂದಿದ್ದಾರೆ. ಈ ವೇಳೆ ನದಿ ದಡದಲ್ಲಿ ಬೈಕ್, ಚಪ್ಪಲಿ ಪತ್ತೆಯಾಗಿವೆ. ಮತ್ತಷ್ಟು ಹತ್ತಿರ ಹೋದಾಗ ರಕ್ತದ ಕಲೆಗಳು ಕಣ್ಣಿಗೆ ಬಿದ್ದಿದ್ರಿಂದ ಆತಂಕಗೊಂಡ ಕುಟುಂಬಸ್ಥರು ಪೊಲೀಸರಿಗೆ ಮಾಹಿತಿ ನೀಡಿ, ಗ್ರಾಮಸ್ಥರ ಸಹಾಯದಿಂದ ಶೋಧ ಕಾರ್ಯ ನಡೆಸಿದ್ರು. ನಂತರ ನಿರ್ಮಾಣ ಹಂತದಲ್ಲಿರೋ ಸೇತುವೆ ಕೆಳಭಾಗದಲ್ಲಿ ರವೀಂದ್ರ ಅವರ ಮೃತದೇಹ ಪತ್ತೆಯಾಗಿದೆ.
ಮೂರು ವರ್ಷದ ಹಿಂದೆ ಮಹಿಳೆ ಆತ್ಮಹತ್ಯೆ ಮಾಡಿಕೊಂಡ ವಿಚಾರವಾಗಿ ರವೀಂದ್ರ ವಿರುದ್ಧ ಕೇಸ್ ದಾಖಲಾಗಿತ್ತು. ನ್ಯಾಯಾಲಯದಲ್ಲಿ ಪ್ರಕರಣ ವಜಾಗೊಂಡ ಬಳಿಕ, ಈ ವಿಚಾರದಲ್ಲಿ ಮೃತ ಮಹಿಳೆಯ ಗಂಡ ರವೀಂದ್ರ ಜೊತೆ ಆಗಾಗ್ಗೆ ಜಗಳ ಮಾಡುತ್ತಿದ್ದ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಮರಳು ದಂಧೆಕೋರರೊಡನೆ ಸೇರಿ ಕೊಲೆ ಮಾಡಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿ ಅವನ ವಿರುದ್ಧ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಕೆಸ್ತೂರು ಪೊಲೀಸರು ಸ್ಥಳ ಪರಿಶೀಲನೆ ನಡೆಸಿ, ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ:ಹೂ ಇಸ್ ಯತ್ನಾಳ್.. ಸಿಎಂ ಬದಲಾವಣೆ ಇಲ್ಲ: ಅರುಣ್ ಸಿಂಗ್ ಗರಂ