ಮಂಡ್ಯ:ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಇಂದು ನೂತನವಾಗಿ ನವೀಕೃತಗೊಂಡಿರುವ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿಯನ್ನು ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದಿನಿಂದ ಕಚೇರಿ ಸಾರ್ವಜನಿಕರ ಸೇವೆಗಾಗಿ ಸಿದ್ಧಗೊಂಡಿದೆ. ಬೆಳಗ್ಗೆಯಿಂದ ಸಂಜೆಯವರೆಗೆ ಯಾರೇ ಬಂದರೂ ನಮ್ಮ ಆಪ್ತ ಸಹಾಯಕರು ಅವರ ಸಮಸ್ಯೆಗೆ ಸ್ಪಂದಿಸಲಿದ್ದಾರೆ. ನಾನೂ ಕೂಡ ಮಂಡ್ಯಕ್ಕೆ ಬಂದಾಗ ಕಚೇರಿಯಲ್ಲೇ ಲಭ್ಯವಿರುತ್ತೇನೆ ಎಂದು ಹೇಳಿದರು. ಇದೇ ವೇಳೆ ಪಡಿತರ ಅಕ್ಕಿ ದಂಧೆಕೋರರಿಗೂ ಎಚ್ಚರಿಕೆ ಸಂದೇಶ ರವಾನಿಸಿದರು.
ಕಚೇರಿ ಕುರಿತು ಮಾತನಾಡುತ್ತಾ, ಜನರ ಸೇವೆಗೆ ಕಚೇರಿ ಸದಾ ತೆರೆದಿರುತ್ತದೆ. ಯಾರೇ ಸಾರ್ವಜನಿಕರು ಬಂದು ಸಮಸ್ಯೆ ಹೇಳಿಕೊಂಡ್ರೂ ಪರಿಹಾರ ಹುಡುಕುವ ಕೆಲಸ ಮಾಡ್ತೇವೆ. ನಾನು ಮಂಡ್ಯಕ್ಕೆ ಬಂದಾಗ ಈ ಕಚೇರಿಗೆ ಬಂದು ಹೋಗ್ತೇನೆ. ಜಿಲ್ಲೆಯ ಅಭಿವೃದ್ಧಿ ಹಾಗೂ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ನಿರಂತರ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಕೆಆರ್‌ಎಸ್ ಡ್ಯಾಂನಿಂದ ನೀರು ಹರಿಸುವ ವಿಚಾರ:ಪ್ರಸ್ತುತ ಕೆಆರ್‌ಎಸ್ ಡ್ಯಾಂನಲ್ಲಿ ನೀರು ಬಹಳ ಕಡಿಮೆ ಇದೆ. ಅನಿರ್ವಾಯವಾಗಿ ಡ್ಯಾಂನಿಂದ ನಾಲೆಗೆ ನೀರು ಬಿಡುವ ಪ್ರಸಂಗ ಎದುರಾಯಿತು. ಹೀಗಾಗಿ ನಾಲೆಗೆ ನೀರು ಬಿಟ್ಟಿದ್ದೇವೆ. ಡ್ಯಾಂದಲ್ಲಿ ಸಂಗ್ರಹ ಆಗಿರುವ ಮೂರ್ನಾಲ್ಕು ಟಿಎಂಸಿ ಮಾತ್ರ ಬಳಸಿಕೊಳ್ಳಬಹುದು. ಎರಡು ಮೂರು ದಿವಸದಲ್ಲಿ ದೇವರು ಕರುಣೆ ತೋರಿಸಿದ್ರೆ ನಾವು ನೀವೆಲ್ಲ ನೆಮ್ಮದಿಯಾಗಿ ಇರಬಹುದು ಎಂದು ಸಲಹೆ ಕೊಟ್ಟರು.