ಮಂಡ್ಯ:ಯುವಕನೊಬ್ಬ ಮದುವೆಯಾಗುವುದಾಗಿ ನಂಬಿಸಿ ತನ್ನುನ್ನು ಲೈಂಗಿಕವಾಗಿ ಬಳಸಿಕೊಂಡು, ಬಳಿಕ ಜಾತಿ ಕಾರಣ ನೀಡಿ ಮದುವೆಯಾಗಲು ಹಿಂದೇಟು ಹಾಕಿದ್ದಾನೆ ಎಂದು ಆರೋಪಿ ಯುವತಿ, ನ್ಯಾಯಕ್ಕಾಗಿ ಯುವಕನ ಮನೆ ಎದುರು ಧರಣಿ ಕುಳಿತಿರುವ ಘಟನೆ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಬಳ್ಳಗೆರೆ ಗ್ರಾಮದಲ್ಲಿ ಭಾನುವಾರ ನಡೆದಿದೆ.
ವಂಚನೆಗೊಳಗಾಗಿರುವ ಆರೋಪ ಮಾಡಿರುವ ಯುವತಿ ಮೂಲತಃ ನಂಜನಗೂಡಿನ ನಿವಾಸಿಯಾಗಿದ್ದಾರೆ. ಎಂಎ, ಬಿಇಡಿ ಪಾಸ್ ಆಗಿರುವ ಯುವತಿ ಖಾಸಗಿ ಶಾಲೆಯೊಂದಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಬಳ್ಳಗೆರೆ ಈಕೆಯ ಅಜ್ಜಿ ಊರಾಗಿದ್ದು, ಕಳೆದ ಹಲವು ವರ್ಷಗಳಿಂದಲೂ ಅಜ್ಜಿಯ ಮನೆಯಲ್ಲಿಯೇ ಇದ್ದಾರೆ. ಕಾಲೇಜಿಗೆ ಹೋಗಿ ಬರುವ ವೇಳೆ ಅದೇ ಗ್ರಾಮದ ಯುವಕನನ್ನು ಪರಿಚಯವಾಗಿತ್ತು. ಪರಿಚಯ ಸ್ನೇಹ ಪ್ರೀತಿಗೆ ತಿರುಗಿ, ಇಬ್ಬರೂ ಪರಸ್ಪರ ಪ್ರೀತಿಸಿ ದೈಹಿಕವಾಗಿ ಒಂದಾಗಿದ್ದಾರೆ. ಆದರೆ, ಪ್ರೀತಿಯ ಸಂದರ್ಭದಲ್ಲಿ ಇಲ್ಲದ ಜಾತಿ, ಮದುವೆ ವಿಚಾರ ಬಂದಾಗ ಅಡ್ಡಿಯಾಗಿತ್ತು. ಯುವತಿ ಮದುವೆಯಾಗುವಂತೆ ಒತ್ತಾಯ ಮಾಡಿದಾಗಲೆಲ್ಲಾ ಯುವಕ ಇಲ್ಲದೇ ಇರುವ ಸಬೂಬು ಹೇಳುತ್ತಿದ್ದ. ಜಾತಿ ಬೇರೆಯಾಗಿರುವುದರಿಂದ ಮೊದಲು ನನ್ನ ಜೊತೆ ಹುಟ್ಟಿದವರ ಮದುವೆಯಾಗಲಿ ನಂತರ ನಾವು ಮದುವೆಯಾಗೋಣ ಎಂದು ಹೇಳಿ ನಂಬಿಸುತ್ತಿದ್ದ ಎಂದು ಯುವತಿ ಆರೋಪ ಮಾಡಿದ್ದಾರೆ.