ಮಂಡ್ಯ: ವಿಜ್ಞಾನಿಗಳ ತಂಡ ಪೆಲಿಕನ್ ಪಕ್ಷಿಗೆ ಜಿಪಿಎಸ್ ಅಳವಡಿಸಿದೆ. ಪಕ್ಷಿಯ ವಾಸಿಸುವ ಸ್ಥಳ ಅದರ ಆಹಾರ ವಿಧಾನ ಹಾಗೂ ಅದರ ಸಂಚಾರ ಮಾರ್ಗವನ್ನು ತಿಳಿಯುವ ಉದ್ದೇಶದಿಂದ ಡೆಹ್ರಾಡೂನ್ನ ವೈಲ್ಡ್ ಲೈಫ್ ಇನ್‌ಸ್ಟಿಟ್ಯೂಟ್‌ನ ವಿಜ್ಞಾನಿಗಳ ತಂಡ ಜಿಲ್ಲೆಯ ಮದ್ದೂರು ತಾಲೂಕಿನ ಕೊಕ್ಕರೆ ಬೆಳ್ಳೂರಿನಲ್ಲಿ ಹೆಜ್ಜಾರ್ಲೆಗೆ ಜಿಪಿಎಸ್ ಅಳವಡಿಸುವಲ್ಲಿ ಯಶಸ್ವಿಯಾಗಿದೆ.
ದೇಶದಲ್ಲೇ ಮೊಟ್ಟ ಮೊದಲ ಬಾರಿಗೆ ಪೆಲಿಕನ್ (ಹೆಜ್ಜಾರ್ಲೆ) ಪಕ್ಷಿಗೆ ವಿಶೇಷ ಜಿಪಿಎಸ್ ಟ್ರ್ಯಾಕ್ ಅಳವಡಿಸುವ ಕಾರ್ಯ ನಡೆದಿದ್ದು, ಈ ಮೂಲಕ ಐತಿಹಾಸಿಕ ದಿನಕ್ಕೆ ಕೊಕ್ಕರೆ ಬೆಳ್ಳೂರು ಪಕ್ಷಿಧಾಮ ಸಾಕ್ಷಿಯಾಗಿದೆ. ಗ್ರೀಸ್‌ನಿಂದ ತಂದಿರುವ ಜಿಪಿಎಸ್ ಟ್ರ್ಯಾಕ್ ಮೂಲಕ ಪಕ್ಷಿಯ ಪ್ರವಾಸ ಮಾರ್ಗವನ್ನು ಕ೦ಡುಹಿಡಿಯಲು ಸಹಕಾರಿಯಾಗಲಿದೆ.
'ಹೆಜ್ಜಾರ್ಲೆ'ಗಳು ಯಾವ್ಯಾವ ದೇಶದಲ್ಲಿ ಸಂಚರಿಸುತ್ತವೆ.. ಎಲ್ಲಿ ತಂಗುತ್ತವೆ.. ಅದರ ಚಟುವಟಿಕೆಗಳು ಏನಿರುತ್ತವೆ ಎಂಬ ಎಲ್ಲ ಮಾಹಿತಿಯನ್ನು ಟ್ರ್ಯಾಕಿಂಗ್ ಮೂಲಕ ತಿಳಿಯಬಹುದಾಗಿದೆ. ಶ್ರೀಲಂಕಾ, ಮ್ಯಾನ್ಮಾರ್ ದೇಶಗಳಿಗೆ ಸಂಚರಿಸಲಿರುವ ಹೆಜ್ಜಾರ್ಲೆ ಪಕ್ಷಿಯ ಮೂಲಸ್ಥಾನ ಯಾವುದು ಎನ್ನುವುದರ ಪಕ್ಕಾ ಮಾಹಿತಿ ದೊರಕುತ್ತದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ಪೆಲಿಕನ್ ಪಕ್ಷಿಗೆ ಜಿಪಿಎಸ್ ಅಳವಡಿಸಿದ ವಿಜ್ಞಾನಿಗಳ ತಂಡ ಸೋಲಾರ್ ಲೈಟ್ ಮೂಲಕ ಆಟೋಮ್ಯಾಟಿಕ್ ಆಗಿ ಚಾರ್ಜ್ ಆಗಲಿರುವ ಗ್ರೀಸ್ನ ಜಿಪಿಎಸ್ ಟ್ರ್ಯಾಕರ್‌ನ್ನು ಒಂದು 'ಹೆಜ್ಜಾರ್ಲೆ' ಪಕ್ಷಿಯ ರೆಕ್ಕೆಗೆ ಯಶಸ್ವಿಯಾಗಿ ಅಳವಡಿಸಲಾಗಿದೆ. ಈ ಮೂಲಕ ಕನಿಷ್ಠ 4 ವರ್ಷಗಳ ಕಾಲ ಪಕ್ಷಿ ಸಂಚರಿಸುವ ಮಾರ್ಗದ ಎಲ್ಲಾ ಮಾಹಿತಿಯನ್ನು ಅರಣ್ಯಾಧಿಕಾರಿಗಳಿಗೆ ಕಳುಹಿಸುತ್ತದೆ. ಕೊಕ್ಕರೆ ಬೆಳ್ಳೂರಿಗೆ ಅಕ್ಟೋಬರ್‌ನಲ್ಲಿ ಬರುವ ಈ ಪಕ್ಷಿಗಳು 2 ತಿಂಗಳ ಬಳಿಕ ಮಾಯವಾಗುತ್ತವೆ. ಕರ್ನಾಟಕ, ತಮಿಳುನಾಡು, ಮಲೇಶಿಯಾ, ಮ್ಯಾನ್ಮಾರ್, ಶ್ರೀಲಂಕಾದಲ್ಲಿ ಮಾತ್ರ ಈ ಪಕ್ಷಿ ಸಂತತಿ ಕಾಣಸಿಗಲಿದೆ.
ಓದಿ:1998ರಿಂದಲೂ ಮಳೆಗಾಲದ 4 ತಿಂಗಳು ಗಿಳಿಗಳಿಗೆ ಆಹಾರ ನೀಡುತ್ತಿರುವ ಪಕ್ಷಿಪ್ರೇಮಿ ಕುಟುಂಬ