ಮಂಡ್ಯ: ವಿಸಿ ನಾಲೆಗೆ ಕಾರು ಉರುಳಿ ಬಿದ್ದು ಐವರು ಜಲಸಮಾಧಿಯಾಗಿರುವ ಘಟನೆ ಪಾಂಡವಪುರ ತಾಲೂಕಿನ ಬನ್ನಘಟ್ಟ ಬಳಿ ಇಂದು ಸಾಯಂಕಾಲ ನಡೆದಿದೆ. ದುರಂತದಲ್ಲಿ ಮೃತಪಟ್ಟವರನ್ನು ಭದ್ರಾವತಿ ಮೂಲದ ಚಂದ್ರಪ್ಪ(61), ಕೃಷ್ಣಪ್ಪ (60), ಧನಂಜಯ್ಯ (55), ಬಾಬು ಮತ್ತು ಜಯಣ್ಣ ಎಂದು ಗುರುತಿಸಲಾಗಿದೆ. ಮೈಸೂರಿನಿಂದ ಭದ್ರಾವತಿಗೆ ವಾಪಸ್ ಹೋಗುವಾಗ ಘಟನೆ ನಡೆದಿದೆ. ಮೃತರು ಗುಂಗರಹಳ್ಳಿ, ನೊಣವಿನಕೆರೆ, ತಿಪಟೂರು ಮೂಲದರಾಗಿದ್ದು, ಭದ್ರಾವತಿಯಲ್ಲಿ ವಾಸವಾಗಿದ್ದರು ಎಂದು ತಿಳಿದುಬಂದಿದೆ.
ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಚಂದ್ರಪ್ಪಗೆ ಸೇರಿದ (ಕೆಎ -14, ಎ 2457) ಬಿಳಿ ಬಣ್ಣದ ಕಾರು ವೇಗವಾಗಿ ಚಲಿಸುತ್ತಿದ್ದ ವೇಳೆ ತಿರುವಿನಲ್ಲಿ ತಡೆಗೋಡೆಗೆ ಡಿಕ್ಕಿ ಹೊಡೆದು ನಾಲೆಗೆ ಬಿದ್ದಿದೆ. ನಾಲೆಯಲ್ಲಿ ನೀರು ಹೆಚ್ಚಿನ ಪ್ರಮಾಣದಲ್ಲಿದ್ದರಿಂದ ಕಾರಿನಲ್ಲಿದ್ದವರು ಪ್ರಾಣಪಾಯದಿಂದ ಪಾರಾಗಲು ಸಾಧ್ಯವಾಗಿಲ್ಲ. ಕೆ ಆರ್ ಎಸ್ ಜಲಾಶಯದಿಂದ ನಾಲೆಗಳಿಗೆ ನಿನ್ನೆಯಿಂದ ನೀರು ಬಿಡುಗಡೆ ಮಾಡಿದ್ದರಿಂದ ನಾಲೆಯಲ್ಲಿ ಹೆಚ್ಚಿನ ಪ್ರಮಾಣದ ನೀರು ಹರಿಯುತ್ತಿತ್ತು.
ಘಟನೆ ವಿವರ: ಐದು ಮಂದಿ ಪುರುಷರು ಪ್ರಯಾಣಿಸುತ್ತಿದ್ದ ಕಾರು ಸಾಯಂಕಾಲ 4.45ರ ಸುಮಾರಿಗೆ ತಡೆಗೋಡೆಗೆ ಡಿಕ್ಕಿ ಹೊಡೆದು ವಿಶ್ವೇಶ್ವರಯ್ಯ ನಾಲೆಯ ನೀರಿನೊಳಗೆ ಬಿದ್ದಿದೆ. ನಾಲೆಯಲ್ಲಿ ಕಾರು ಮುಳುಗುತ್ತಿದ್ದ ದೃಶ್ಯವನ್ನು ಸ್ಥಳೀಯರು ವೀಕ್ಷಿಸಿ ಜೋರಾಗಿ ಕಿರುಚಿ, ರಕ್ಷಿಸಲು ಬರುವಷ್ಟರಲ್ಲಿ ಕಾರು ನೀರಿನಲ್ಲಿ ಮುಳುಗಿದೆ. ವಿಷಯ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ಭೇಟಿ ಅಗ್ನಿಶಾಮಕ ದಳ ಹಾಗೂ ನುರಿತ ಈಜುಗಾರರ ಸಹಾಯದಿಂದ ನಾಲೆ ನೀರಿನೊಳಗೆ ಮುಳುಗಿದ್ದವರನ್ನು ಮತ್ತು ಕಾರು ಮೇಲೆತ್ತಲು ಕಾರ್ಯಾಚರಣೆ ನಡೆಸಿದರು. ಕ್ರೇನ್ ಮೂಲಕ 8.15ರ ಸುಮಾರಿಗೆ ಕಾರನ್ನು ಮೇಲಕ್ಕೆ ಎತ್ತಲಾಯಿತು. ಆಗ ಐವರ ಶವಗಳು ಕಾರಿನಲ್ಲಿರುವುದು ಕಂಡುಬಂದಿದೆ.