ಮಂಡ್ಯ: ನೋಟಿನ ಕಂತೆ ಮಧ್ಯೆ ಬಿಳಿ ಕಾಗದ ಇಟ್ಟು ವಂಚಿಸಲು ಯತ್ನಿಸಿದವನಿಗೆ ಸಾರ್ವಜನಿಕರು ಗೂಸಾ ಕೊಟ್ಟಿರುವ ಘಟನೆ ಸಕ್ಕರೆನಾಡು ಮಂಡ್ಯದ ಉಪನೋಂದಣಿ ಕಚೇರಿ ಬಳಿ ಶುಕ್ರವಾರ ಸಂಜೆ ನಡೆದಿದೆ. ನೋಟಿನ ಮಧ್ಯೆ ಬಿಳಿ ಹಾಳೆ ಇಟ್ಟು ಯಾಮಾರಿಸಲು ಮುಂದಾದ ಸಯ್ಯದ್ ಆರುನ್ ತಮೀಮ್ ಎಂಬಾತನಿಗೆ ಸ್ಥಳೀಯರು ಧರ್ಮದೇಟು ನೀಡಿ, ಪೊಲೀಸರಿಗೆ ಒಪ್ಪಿಸಿದ್ದಾರೆ.
ಮಂಡ್ಯದ ಕಾಳೇನಹಳ್ಳಿ ಗ್ರಾಮದ ಉಮೇಶ್ ಎಂಬುವರು ತಮ್ಮ ಜಮೀನು ಮಾರಾಟ ಮಾಡಲು ಮುಂದಾಗಿದ್ದರು. ಇದನ್ನು ಮಂಡ್ಯ ನಗರದ ಸಬ್ಬರಿಯಬಾದ್ ನಿವಾಸಿ ಸಯ್ಯದ್ ಆರುನ್ ತಮೀಮ್ ಎಂಬ ವ್ಯಕ್ತಿ ಖರೀದಿ ಮಾಡಿಕೊಳ್ಳುವುದಾಗಿ ತಿಳಿಸಿದ್ದರು. ಹೀಗಾಗಿ, ಶುಕ್ರವಾರ ನಗರದ ಉಪ ನೊಂದಣಿ ಕಚೇರಿಗೆ ಎರಡೂ ಕಡೆಯವರು ಆಗಮಿಸಿದ್ದರು. ಈ ವೇಳೆ, ಮೊದಲೇ ಮಾತುಕತೆ ನಡೆಸಿದಂತೆ ಸಯ್ಯದ್ ಆರುನ್, ನೋಂದಣಿ ಬಳಿಕ 30 ಲಕ್ಷ ಹಣ ಕೊಡೋದಾಗಿ ಹೇಳಿ ನೋಟಿನ ಮಧ್ಯೆ ಬಿಳಿ ಹಾಳೆಯ ಕಂತೆಯನ್ನು ಇಟ್ಟು ಯಾಮಾರಿಸಿದ್ದಾರೆ.
ಹಣ ಪಡೆದು ಲೆಕ್ಕಾಚಾರದಲ್ಲಿ ನಿರತರಾಗಿದ್ದ ಉಮೇಶ್ ಕಡೆಯವರು ಬಿಳಿ ಹಾಳೆ ಕಂಡು ದಿಗ್ಗಭ್ರಮೆಗೊಂಡಿದ್ದಾರೆ. ಬಳಿಕ, ಉಪನೋಂದಣಿ ಕಚೇರಿ ಬಳಿ ಇದ್ದ ಸಾರ್ವಜನಿಕರು ವಂಚಿಸಿದ ವ್ಯಕ್ತಿಯನ್ನು ಹಿಡಿದು ಥಳಿಸಿದ್ದು, ಮಂಡ್ಯದ ಪಶ್ಚಿಮ ಠಾಣೆ ಪೊಲೀಸರಿಗೆ ಒಪ್ಪಿಸಿದ್ದಾರೆ. ಸದ್ಯಕ್ಕೆ ಮಂಡ್ಯ ಪಶ್ಚಿಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನ ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.