ಮಂಡ್ಯ:ಮಳವಳ್ಳಿಯಲ್ಲಿ ಬಾಲಕಿ ಮೇಲೆ ಅತ್ಯಾಚಾರ, ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಆಕೆಯ ಶವವಿಟ್ಟು ಕುಟುಂಬಸ್ಥರು ಹಾಗೂ ಸಾರ್ವಜನಿಕರು ಪಟ್ಟಣದ ಅನಂತರಾಮ್ ವೃತ್ತದ ಬಳಿ ಪ್ರತಿಭಟನೆ ನಡೆಸಿದರು.
ಜನವಾದಿ ಮಹಿಳಾ ಸಂಘಟನೆ ಹಾಗೂ ಸಾರ್ವಜನಿಕರು, ಮಾಜಿ ಸಚಿವ ನರೇಂದ್ರಸ್ವಾಮಿ, ಶಾಸಕ ಅನ್ನದಾನಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಮಗುವಿನ ಶವವನ್ನು ತೆರೆದ ವಾಹನದಲ್ಲಿಟ್ಟು, ಪಟ್ಟಣದಲ್ಲಿ ಮೆರವಣಿಗೆ ನಡೆಸಿದ ಸಾರ್ವಜನಿಕರು ಮಳವಳ್ಳಿಪುರ ಪೊಲೀಸ್ ಠಾಣೆಯ ಮುಂದೆ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯಲ್ಲಿ ಸಾವಿರಾರು ಜನ ಭಾಗವಹಿಸಿ, ಕೂಡಲೇ ಆರೋಪಿಗೆ ಗಲ್ಲು ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದರು.
ಓರ್ವ ಹೆಣ್ಣು ಮಗಳಿಗೆ ಘೋರ ಅನ್ಯಾಯ ಆಗಿದೆ. ಇಂತಹ ಘಟನೆಯಿಂದ ಮಳವಳ್ಳಿ ಜನರು ಆತಂಕಗೊಂಡಿದ್ದಾರೆ. ಆರೋಪಿಗೆ ಕಠಿಣ ಶಿಕ್ಷೆ ನೀಡಿ, ಬಾಲಕಿಗೆ ನ್ಯಾಯಕೊಡಿಸಬೇಕು. ಜನರನ್ನ ಕಾಪಾಡುವ ಕೆಲಸವಾಗಬೇಕು. ಪೊಲೀಸ್ ಇಲಾಖೆ ಎಚ್ಚೆತ್ತು ಕೆಲಸ ಮಾಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಇದನ್ನೂ ಓದಿ:ಮಂಡ್ಯ: ಟ್ಯೂಷನ್ಗೆ ಕರೆದು ವಿದ್ಯಾರ್ಥಿನಿ ಮೇಲೆ ಅತ್ಯಾಚಾರ, ಕೊಲೆ ಮಾಡಿ ಸಂಪ್ಗೆ ಎಸೆದ ಕಿರಾತಕ
ಘಟನೆ ಹಿನ್ನೆಲೆ: ಮೈಸೂರು ರಸ್ತೆಯ ಮಯೂರ ಬೇಕರಿ ಹಿಂಭಾಗದ ನಿರ್ಮಾಣ ಹಂತದ ಮನೆಯ ಕಟ್ಟಡದಲ್ಲಿ 10 ವರ್ಷದ ವಿದ್ಯಾರ್ಥಿನಿ ಶವ ಪತ್ತೆಯಾಗಿದೆ. ಮಂಗಳವಾರ ಬೆಳಗ್ಗೆ ಟ್ಯೂಷನ್‌ಗಾಗಿ ಮನೆಯಿ೦ದ ಹೋಗಿದ್ದ ವಿದ್ಯಾರ್ಥಿನಿ ಬಳಿಕ ಮನೆಗೆ ವಾಪಸ್ ಬಾರದ ಹಿನ್ನೆಲೆ ಟ್ಯೂಷನ್ ಸೆಂಟರ್ ಸೇರಿದಂತೆ ಅಕ್ಕಪಕ್ಕದಲ್ಲಿ ಪೋಷಕರು ವಿಚಾರಿಸಿದ್ದಾರೆ.
ಎಲ್ಲಿಯೂ ಬಾಲಕಿ ಪತ್ತೆಯಾಗಿಲ್ಲ. ಬಳಿಕ ಮೈಸೂರು ರಸ್ತೆಯ ಮಯೂರ ಬೇಕರಿ ಹಿಂಭಾಗದ ನಿರ್ಮಾಣ ಹಂತದ ಮನೆಯ ಕಟ್ಟಡದ ಸಮೀಪದಲ್ಲಿ ಪರಿಶೀಲಿಸಿದಾಗ ನೀರಿನ ಸಂಪ್ ಒಳಗೆ ಬಾಲಕಿಯ ಶವ ಪತ್ತೆಯಾಗಿತ್ತು.
ಒಮ್ಮೊಮ್ಮೆ ಚಿಕ್ಕ ಮಕ್ಕಳಿಗೆ ಆರೋಪಿ ಮಕ್ಕಳಿಗೆ ತಾನೇ ಪಾಠ ಮಾಡುತ್ತಿದ್ದ. ಕಟ್ಟಡದ ಮಾಲೀಕರು ಮೈಸೂರಿನಲ್ಲಿ ನೆಲೆಸಿದ್ದರು. ಹೀಗಾಗಿ ಆರೋಪಿ ಆಡಿದ್ದೇ ಆಟವಾಗಿತ್ತು ಎಂಬುದು ಸ್ಥಳೀಯರ ಮಾತಾಗಿದೆ. ಈತ ಟ್ಯೂಷನ್ ಕೇಂದ್ರದ ಉಸ್ತುವಾರಿ ಎಂದೂ ಹೇಳಲಾಗುತ್ತಿದೆ.