ಮಂಡ್ಯ: ಕರೊನಾ ಮೊದಲ ಹಾಗೂ ಎರಡನೇ ಅಲೆ ಆರಂಭದಲ್ಲಿ ಸಕ್ಕರೆ ನಾಡು ಮಂಡ್ಯಕ್ಕೆ ಮಹಾರಾಷ್ಟ್ರ ಕಂಟಕ ಕಾಡಿತ್ತು. ಇದೀಗ ಮೂರನೇ ಅಲೆಯ ಅಬ್ಬರ ಶುರುವಾಗುತ್ತಿದ್ದಂತೆ ತಮಿಳುನಾಡು ಪ್ರವಾಸ ಮುಗಿಸಿ ಬಂದವರಲ್ಲಿ ಸೋಂಕು ಕಾಣಿಸಿಕೊಂಡಿರುವುದು ಆತಂಕ ಸೃಷ್ಟಿಸಿದೆ.
ಇತ್ತೀಚೆಗೆ ತಮಿಳುನಾಡಿನ ಓಂ ಶಕ್ತಿ ದೇವಾಯಕ್ಕೆ ಹೋಗಿ ಬಂದವರಲ್ಲಿ ಸೋಂಕು ದೃಢಪಡುತ್ತಿದ್ದು, ಜಿಲ್ಲಾಡಳಿತಕ್ಕೆ ತಲೆನೋವು ತರಿಸಿದೆ. ಮಂಡ್ಯ ಜಿಲ್ಲೆಯ ಹಲವಾರು ಹಳ್ಳಿಗಳಿಂದ ಈವರೆಗೆ ಸುಮಾರು 3600 ಮಂದಿ ಓಂ ಶಕ್ತಿ ಯಾತ್ರೆ ಮುಗಿಸಿ ಬಂದಿದ್ದು, ಎಲ್ಲರಿಗೂ ಕರೊನಾ ಟೆಸ್ಟ್ಗೆ ಒಳಪಡಿಸಿದಾಗ 89 ಮಂದಿಗೆ ಸೋಂಕು ವಕ್ಕರಿಸಿದೆ. ಇದು ಜನರನ್ನು ನಿದ್ದೆಗೆಡಿಸುವಂತೆ ಮಾಡಿದೆ.
ಇನ್ನು ಯಾತ್ರೆ ಮುಗಿಸಿ ಬಂದವರಿಗೆ ಕರೊನಾ ದೃಢಪಡುತ್ತಿದ್ದಂತೆ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಅಲರ್ಟ್ ಆಗಿದ್ದು, ನೆಗೆಟಿವ್ ಬಂದವರಿಗೂ ಹೋಂ ಕ್ವಾರಂಟೈನ್ ಮಾಡಲಾಗುತ್ತಿದೆ. ಅವರೆಲ್ಲರಿಗೂ 7 ದಿನದ ಬಳಿಕ ಮತ್ತೊಮ್ಮೆ ಟೆಸ್ಟ್ ಮಾಡಲು ನಿರ್ಧರಿಸಲಾಗಿದೆ. ಇನ್ನು ನಾಳೆ ಮತ್ತೆ 803 ಮಂದಿ ಮಂಡ್ಯಕ್ಕೆ ವಾಪಸ್ಸಾಗಲಿದ್ದು, ಅವರಿಗೆ ಪರೀಕ್ಷೆಗೊಳಪಡಿಸಲು ಸಿದ್ದತೆ ಮಾಡಿಕೊಳ್ಳಲಾಗಿದೆ.
ಡಿಸಿ ಎಸ್.ಅಶ್ವಥಿ ನೇತೃತ್ವದಲ್ಲಿ ತುರ್ತು ಸಭೆ
ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಎಸ್.ಅಶ್ವಥಿ ಅವರು ಜಿಲ್ಲಾಮಟ್ಟದ ಅಧಿಕಾರ ತುರ್ತು ಸಭೆ ನಡೆಸಿದ್ದಾರೆ. ಹೊರ ರಾಜ್ಯಗಳಿಗೆ ಪ್ರವಾಸಕ್ಕೆ ತೆರಳಲು ಬಸ್ ಬುಕಿಂಗ್ ಮಾಡಿಕೊಂಡಿದ್ರೆ ಕೂಡಲೇ ಬುಕಿಂಗ್ ರದ್ದು ಮಾಡುವಂತೆ ಕೆಎಸ್ಆರ್ ಟಿಸಿ ಅಧಿಕಾರಿಗೆ ಸೂಚನೆ ನೀಡಿದರು. ಅಲ್ಲದೆ ಮೂರನೇ ಅಲೆ ಎದುರಿಸಲು ಪ್ರತೀ ತಾಲ್ಲೂಕಿನಲ್ಲಿ ಕ್ವಾರಂಟೈನ್ ಕೇಂದ್ರ ಹಾಗೂ ಐಸೊಲೇಷನ್ ಸೆಂಟರ್ ತೆರೆಯಲು ತಹಸೀಲ್ದಾರಿಗಳಿಗೆ ಸೂಚಿಸಿದ್ದಾರೆ.
ಮಾಸ್ಕ್ ಹಾಕಿಕೊಳ್ಳದೇ ಬೇಜವಾಬ್ದಾರಿ ತೋರುವ ಜನರಿಗೆ ದಂಡ ಹಾಕಲು ಆದೇಶ ನೀಡಿದರು.