ಮಂಡ್ಯ: ರಸ್ತೆಯಲ್ಲಿ ನಿಂತಿದ್ದ ಬಸ್ಗೆ ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ನಾಗಮಂಗಲ ತಾಲೂಕಿನ ಬಿ ಜಿ ನಗರದ ಆದಿಚುಂಚನಗಿರಿ ಆಸ್ಪತ್ರೆ ಎದುರು ಬುಧವಾರ ಬೆಳಗ್ಗೆ ಸಂಭವಿಸಿದೆ. ಮೃತರನ್ನು ನಮಿತಾ, ರಘುನಾಥ್ ಭಜಂತ್ರಿ, ಪಂಕಜ್ ಶರ್ಮಾ, ವಂಶಿಕೃಷ್ಣ ಎಂದು ಗುರುತಿಸಲಾಗಿದೆ. ಮೃತರೆಲ್ಲರೂ ಪ್ರತಿಷ್ಠಿತ ಸಾಫ್ಟ್ ವೇರ್ ಕಂಪನಿ ಉದ್ಯೋಗಿಗಳು ಎಂದು ತಿಳಿದುಬಂದಿದೆ.
ಇಂದು ಬೆಳಗ್ಗೆ 8 ಗಂಟೆ ಸುಮಾರಿಗೆ ರಸ್ತೆ ಬದಿ ನಿಂತಿದ್ದ KSRTC ಬಸ್ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ದುರ್ಘಟನೆ ಸಂಭವಿಸಿದೆ. ಹಾಸನ ಕಡೆಯಿಂದ ಬಂದ ಕಾರು ಹಿಂಬದಿಯಿಂದ ಬಸ್ಗೆ ಡಿಕ್ಕಿ ಹೊಡೆದಿದೆ. ಸ್ಥಳಕ್ಕೆ ಬೆಳ್ಳೂರು ಠಾಣೆ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದಾರೆ. ಬೆಳ್ಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತುಮಕೂರು ಭೀಕರ ರಸ್ತೆ ಅಪಘಾತ.. ಮೂವರು ಸಾವು : ತುಮಕೂರು ಜಿಲ್ಲೆಯಲ್ಲಿ ಕಾರು ಮತ್ತು ಲಾರಿ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಸಾವನ್ನಪ್ಪಿ, ಓರ್ವ ಗಂಭೀರ ಗಾಯಗೊಂಡಿದ್ದ ಘಟನೆ ಮಂಗಳವಾರ ನಡೆದಿತ್ತು. ಮಧುಗಿರಿ ತಾಲೂಕಿನ ಮಿಡಿಗೇಶಿ ಬಳಿ ನಡೆದ ರಸ್ತೆ ಅಪಘಾತ ಸಂಭವಿಸಿತ್ತು. ಮೃತರನ್ನು ಆಕಾಶ್ (20), ಹೇಮಂತ್ ಹಾಗೂ ಶಿವಕುಮಾರ್ ಎಂದು ಗುರುತಿಸಲಾಗಿತ್ತು.
ಬೆಂಗಳೂರಿನಿಂದ ಪಾವಗಡ ಕಡೆಗೆ ಬರುತ್ತಿದ್ದ ಕಾರು, ಪಾವಗಡದಿಂದ ತುಮಕೂರಿನ ಕಡೆಗೆ ಹೋಗುತ್ತಿದ್ದ ಲಾರಿ ಮುಖಾಮುಖಿ ಡಿಕ್ಕಿಯಾಗಿತ್ತು. ಅಪಘಾತದಲ್ಲಿ ಕಾರು ಸಂಪೂರ್ಣ ನಜ್ಜುಗುಜ್ಜಾಗಿತ್ತು. ಕಾರಿನಲ್ಲಿದ್ದವರು ಪಾವಗಡ ಮೂಲದವರು ಎಂದು ಹೇಳಲಾಗಿದೆ. ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದು, ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿಯನ್ನು ಇಲ್ಲಿನ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಮೈಸೂರು ಎಕ್ಸ್‌ಪ್ರೆಸ್ ಹೈವೇಯಲ್ಲಿ ಸರಣಿ ಅಪಘಾತ.. ಮೂವರು ಸಾವು :ರಾಮನಗರ ಜಿಲ್ಲೆಯ ಬೆಂಗಳೂರು - ಮೈಸೂರು ಎಕ್ಸ್‌ಪ್ರೆಸ್ ಹೈವೇಯಲ್ಲಿ ಕಳೆದೆರಡು ದಿನಗಳ ಹಿಂದೆ ಸರಣಿ ಅಪಘಾತ ನಡೆದಿತ್ತು. ಚನ್ನಪಟ್ಟಣ ತಾಲೂಕಿನ ದೇವರಹೊಸಹಳ್ಳಿ ಬಳಿ ನಡೆದ ಆರು ಕಾರುಗಳ ಸರಣಿ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಮೃತಪಟ್ಟು, ಇಬ್ಬರು ಗಂಭೀರ ಗಾಯಗೊಂಡಿದ್ದರು. ಮೃತರನ್ನು ರೇಣುಕಮ್ಮ, ಮಂಜುಳಾ ಹಾಗೂ ಸುಧೀರ್ ಎಂದು ಗುರುತಿಸಲಾಗಿತ್ತು. ಗಂಭೀರ ಗಾಯಗೊಂಡವರನ್ನು ರಾಮನಗರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು.
ತುಂತುರು ಮಳೆ ಹಿನ್ನೆಲೆ ಈ ಸರಣಿ ಕಾರು ಅಪಘಾತ ಸಂಭವಿಸಿತ್ತು. ಇದರಿಂದಾಗಿ ಮುಂದೆ ಹೋಗುತ್ತಿದ್ದ ವಾಹನಗಳು ಸರಿಯಾಗಿ ಕಾಣದೆ ಒಂದಕ್ಕೊಂದು ಕಾರುಗಳು ಡಿಕ್ಕಿಯಾಗಿದೆ. ಸ್ಥಳಕ್ಕೆ ಚನ್ನಪಟ್ಟಣ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.
ಇದನ್ನೂ ಓದಿ :ಚಲಿಸುತ್ತಿದ್ದ ಬಸ್ಸಿನಿಂದ ಬಿದ್ದು ಓರ್ವ ಸಾವು : ಮತ್ತೋರ್ವನಿಗೆ ಗಾಯ