ಮಂಡ್ಯ:ನಾಗಮಂಗಲ ಪಟ್ಟಣದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಮತ್ತು ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿರುವ 28 ಮಂದಿ ವಿದ್ಯಾರ್ಥಿನಿಯರಿಗೆ ಕೋವಿಡ್ ಸೋಂಕು ದೃಢಪಟ್ಟಿದ್ದು, ಇತರ ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಆತಂಕ ಉಂಟು ಮಾಡಿದೆ.
ಕಾಲೇಜಿನ 28 ಮಂದಿ ವಿದ್ಯಾರ್ಥಿನಿಯರಿಗೆ ಕೊರೊನಾ ಸೋಂಕು ತಗುಲಿದೆ. ನಾಗಮಂಗಲದ ಪಟ್ಟಣದ ಟ್ಯಾಂಕ್ ಫೀಲ್ಡ್‌ನಲ್ಲಿರುವ ಕಾಲೇಜಿನಲ್ಲಿ ತಾಲೂಕಿನ ಗ್ರಾಮೀಣ ಪ್ರದೇಶದ ಹೆಣ್ಣುಮಕ್ಕಳೇ ಹೆಚ್ಚಾಗಿದ್ದು, ಪ್ರಥಮ ಹಾಗೂ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿರುವ ಒಟ್ಟು 412 ಮಂದಿ ವಿದ್ಯಾರ್ಥಿನಿಯರ ಪೈಕಿ 372 ಮಂದಿಗೆ ನಡೆಸಿದ ಕೋವಿಡ್ ಪರೀಕ್ಷೆಯಲ್ಲಿ 19 ವಿದ್ಯಾರ್ಥಿನಿಯರಿಗೆ ಪಾಸಿಟಿವ್ ದೃಢಪಟ್ಟಿತ್ತು.
ಕೋವಿಡ್ ಟೆಸ್ಟ್:
ಇವರ ಪ್ರಾಥಮಿಕ ಸಂಪರ್ಕದಲ್ಲಿದ್ದ ಹಲವು ಬಾಲಕಿಯರನ್ನು ಕೋವಿಡ್ ಪರೀಕ್ಷೆಗೊಳಪಡಿಸಿದ ವೇಳೆ ಮತ್ತೆ 9 ವಿದ್ಯಾರ್ಥಿನಿಯರಿಗೆ ಪಾಸಿಟಿವ್ ದೃಢಪಟ್ಟಿದೆ. ಹೀಗೆ ಒಂದೇ ಕಾಲೇಜಿನ 28 ಮಂದಿ ಕೋವಿಡ್ ಸೋಂಕಿತ ಬಾಲಕಿಯರಿಗೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಕೋವಿಡ್ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಎಲ್ಲ 28 ಸೋಂಕಿತರನ್ನು ಪಟ್ಟಣದ ಕೋಟೆಬೆಟ್ಟ ರಸ್ತೆಯಲ್ಲಿರುವ ಬಿಸಿಎಂ ಹಾಸ್ಟೆಲ್‌ನ ಕೋವಿಡ್ ಆರೈಕೆ ಕೇಂದ್ರಕ್ಕೆ ಸ್ಥಳಾಂತರಿಸಲಾಗುವುದು. ಅಲ್ಲಿ ಸೂಕ್ತ ಚಿಕಿತ್ಸೆ ನೀಡಿ ಶೀಘ್ರದಲ್ಲಿ ಗುಣಮುಖರನ್ನಾಗಿಸಲು ಅಗತ್ಯ ಕ್ರಮ ವಹಿಸಲಾಗುವುದು ಎಂದು ತಾಲೂಕು ಆರೋಗ್ಯಾಧಿಕಾರಿ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ.
ನಾಗಮಂಗಲ ಪಟ್ಟಣದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜನ್ನು ಇಂದು ಬೆಳಗ್ಗೆ ಸ್ಯಾನಿಟೈಸರ್ ಮಾಡಿದ ನಂತರ ಮುಂದಿನ 7 ದಿನಗಳ ಕಾಲ ಸೀಲ್ಡೌನ್ ಮಾಡಲಾಗುತ್ತಿದೆ.
ಇದನ್ನೂ ಓದಿ:ಕಾರಾಗೃಹ ಸಂಘರ್ಷ: ನೂರು ದಾಟಿದ ಸಾವಿನ ಸಂಖ್ಯೆ, ಪೈಪ್ಲೈನ್ನಲ್ಲೂ ಹೆಣಗಳ ರಾಶಿ