ಕೊಪ್ಪಳ :ವಿಧಿಯಾಟಕ್ಕೆ ಯುವಕನೋರ್ವ ಬಲಿಯಾಗಿದ್ದು, ಅಂಗಾಗ ಮಾಡುವ ಮೂಲಕ ನಾಲ್ಕು ಜನರ ಜೀವನಕ್ಕೆ ಆಸರೆಯಾಗಿರುವ ಘಟನೆ ಕೊಪ್ಪಳದಲ್ಲಿ ಜರುಗಿದೆ.
ಘಟನೆ ವಿವರ : ಕೊಪ್ಪಳ ಜಿಲ್ಲೆಯ ಕಿನ್ನಾಳ ಗ್ರಾಮದ ಗ್ರಾಮ ಪಂಚಾಯತಿ ಸದಸ್ಯನಾಗಿದ್ದ ಮಲ್ಲಪ್ಪ ಉದ್ದಾರ (36) ಇತ್ತೀಚೆಗೆ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಮೃತಪಟ್ಟಿದ್ದರು. ಕಳೆದ ಡಿ. 24 ರಂದು ಕೊಪ್ಪಳ ಜಿಲ್ಲೆಯ ವಿರಾಪೂರ ಗ್ರಾಮದ ಬಳಿ ನಡೆದ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಮಲ್ಲಪ್ಪನ್ನು ಕೂಡಲೇ ಮೊದಲು ಜಿಲ್ಲಾ ಆಸ್ಪತ್ರೆ ನಂತರ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆಂದು ದಾಖಲಿಸಲಾಯಿತು. ಆದರೆ, ಆತನ ಮೆದುಳು ನಿಷ್ಕ್ರಿಯಗೊಂಡಿರುವುದರಿಂದ ಚಿಕಿತ್ಸೆಗೆ ಸ್ಪಂದನೆ ದೊರೆಯುತ್ತಿಲ್ಲ ಎಂದು ವೈದ್ಯರು ಕುಟುಂಬಸ್ಥರಿಗೆ ತಿಳಿಸಿದ್ದರು.
ಅಂಗಾಗ ದಾನ: ಅಪಘಾತದಲ್ಲಿ ಮೆದುಳು ನಿಷ್ಕ್ರಿಯ ಆಗಿರುವುದರಿಂದ ಅವರ ಸಹೋದರರಾದ ಮಂಜುನಾಥ ಮತ್ತು ಶೇಖರಪ್ಪ ಅವರು ಕುಟುಂಬದವರೊಂದಿಗೆ ಚರ್ಚೆ ಮಾಡಿ ಅಂಗಾಗ ದಾನ ಮಾಡುವ ನಿರ್ಧಾರ ಮಾಡಿದ್ದಾರೆ. ಯುವಕನ ಕಿಡ್ನಿ, ಲಿವರ್, ಹೃದಯ ಸೇರಿದಂತೆ ಇನ್ನಿತರ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಇದರಿಂದ ನಾಲ್ವರ ಜೀವನಕ್ಕೆ ಆಸರೆಯಾಗಿದೆ.