ಕೊಪ್ಪಳ:ಭೂಮಿಯನ್ನೇ ತಾಯಿಯಂತೆ ಗೌರವಿಸುವ ರೈತರು ವರ್ಷದಲ್ಲಿ ಒಂದು ದಿನ ಭೂರಮೆಗೆ ವಿಶೇಷವಾಗಿ ಪೂಜೆ ಮಾಡುತ್ತಾರೆ. ಪೈರಿನಿಂದ ಒಡಲು ತುಂಬಿಕೊಂಡ ಭೂರಮೆಗೆ ಎಳ್ಳು ಅಮಾವಾಸ್ಯೆ ದಿನವಾದ ಇಂದು ರೈತರು ಹರ್ಷದಿಂದ ಚೆರಗ ಚೆಲ್ಲಿದರು.
ಎಳ್ಳು ಅಮಾವಾಸ್ಯೆಯ್ನು ಉತ್ತರಕರ್ನಾಟಕ ಭಾಗದಲ್ಲಿ ವಿಶೇಷವಾಗಿ ಆಚರಣೆ ಮಾಡುತ್ತಾರೆ. ಜಿಲ್ಲೆಯಲ್ಲಿಯೂ ಎಳ್ಳು ಅಮಾವಾಸ್ಯೆ ಹಿನ್ನೆಲೆಯಲ್ಲಿ ರೈತರು ತಮ್ಮ ತಮ್ಮ ಹೊಲಗಳಿಗೆ ತೆರಳಿ ಭೂಮಿ ಪೂಜೆ ನೆರವೇರಿಸಿದರು.
ಕೊರೊನಾ ಭೀತಿಯಿಂದ ಕಳೆದ ವರ್ಷ ಕಳೆಗುಂದಿದ್ದ ಚರಗ ಚೆಲ್ಲುವ ಸಂಭ್ರಮ, ಈ ಬಾರಿ ಸಂಭ್ರಮದಿಂದ ನೆರವೇರಿತು. ರೈತರು ಹೊಲದ ಮಧ್ಯದಲ್ಲಿ ಐದು ಕಲ್ಲುಗಳನ್ನಿಟ್ಟು ಪೂಜೆ ಸಲ್ಲಿಸಿದರು. ಈ ಐದು ಕಲ್ಲುಗಳು ಪಂಚ ಪಾಂಡವರ ಸ್ವರೂಪ ಎಂಬುದು ನಂದಿಕೆ. ಹೊಲದಲ್ಲಿನ ಬೆಳೆಗಳು ಕಳ್ಳತನವಾಗಬಾರದು ಎಂಬ ಉದ್ದೇಶದಿಂದ ಒಂದು ಕಲ್ಲನ್ನು ಕಳ್ಳನ ರೂಪದಲ್ಲಿಟ್ಟು ಕಳ್ಳನಿಗೂ ವಿಶೇಷ ಪೂಜೆ ಸಲ್ಲಿಸುವುದು ಹಿಂದಿನಿಂದಲೂ ಬೆಳೆದು ಬಂದ ಸಂಪ್ರದಾಯವಾಗಿದೆ.