ಕುಷ್ಟಗಿ / ಕೊಪ್ಪಳ: ಹವಾಮಾನ ವೈಪರೀತ್ಯದಿಂದ ಹೆಸರು ಬೆಳೆಗೆ ಕಾಡಿದ ಹಳದಿ ರೋಗದಿಂದಾಗಿ ಹೆಸರು ಕಾಳು ಶೈನಿಂಗ್ (ಮಿಂಚು) ಕಳೆದುಕೊಂಡಿದ್ದು, ಈ ಕಾಳಿಗೆ ಸ್ಥಳೀಯ ಎಪಿಎಂಸಿ ಮಾರುಕಟ್ಟೆಯಲ್ಲಿ ದರ ಕಡಿಮೆಯಾಗಿರುವುದು ಚಿಂತೆಗೆ ಕಾರಣವಾಗಿದೆ.
ಕುಷ್ಟಗಿ: ಹಳದಿ ರೋಗದಿಂದ ಮೌಲ್ಯ ಕಳೆದುಕೊಂಡ ಹೆಸರು ಬೆಳೆ ಫಸಲು - Yellow Disease for the green legume
ಪ್ರಸಕ್ತ ಎಪಿಎಂಸಿ ಮಾರುಕಟ್ಟೆಯಲ್ಲಿ ಹೆಸರು ಕಾಳಿನ ಸದ್ಯದ ದರ ಕುಸಿಯುವ ಆತಂಕದ ಹಿನ್ನೆಲೆ ರೈತರು ಅರೆ ಬರೆ ಒಣಗಿದ ಕಾಳನ್ನು ಮಾರುಕಟ್ಟೆಗೆ ತರುತ್ತಿದ್ದಾರೆ ಎಂದು ಕುಷ್ಟಗಿ ಎಪಿಎಂಸಿ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.
ತಾಲೂಕಿನಲ್ಲಿ 1,557 ಹೆಕ್ಟೇರ್ ಗುರಿಯಲ್ಲಿ 1,150 ಹೆಕ್ಟೇರ್ನಲ್ಲಿ ಹೆಸರು ಬಿತ್ತನೆಯಾಗಿದೆ. ಈ ಬೆಳೆ ಕಾಳು ಕಟ್ಟುವ ಹಂತದಲ್ಲಿ ಕರಿ ಹೇನು ರಸ ಹೀರುವ ಕೀಟದಿಂದ ಹಳದಿ ಮೊಜಾಯಿಕ್ ರೋಗಕ್ಕೆ ತುತ್ತಾಗಿದೆ. ಈ ಹಿನ್ನೆಲೆ ಹೆಸರು ಕಾಳಿನ ಗಾತ್ರ ಕಡಿಮೆಯಾಗಿದ್ದು, ಕಾಳು ಮಿಂಚು ಕಳೆದುಕೊಂಡಿದೆ. ಇಂತಹ ಕಾಳಿಗೆ ಮಾರುಕಟ್ಟೆಯ ದರ ಸದ್ಯದ ಧಾರಣೆ ಪ್ರತಿ ಕ್ವಿಂಟಲ್ ಗೆ 6,500 ರೂ ಇದೆ. ಉತ್ತಮ ಕಾಳು ಗಾತ್ರವೂ ಹೆಚ್ಚಿದ್ದು, ಮಿಂಚಿನಿಂದ ಕೂಡಿರುವ ಕಾಳಿಗೆ 8,200 ರೂ ಪ್ರತಿ ಕ್ವಿಂಟಲ್ಗೆ ಇತ್ತು.
ಕಳೆದ ವಾರದಿಂದ ಹೆಸರು ಕಾಳು ಮಾರುಕಟ್ಟೆಗೆ ಬರುತ್ತಿದ್ದು, ಇನ್ನೂ ಮೂರು ವಾರದವರೆಗೂ ಆವಕ ಬರಲಿದೆ. ಕುಷ್ಟಗಿ ಮಾರುಕಟ್ಟೆಯಲ್ಲಿ ದರ ಕಡಿಮೆ ಹಿನ್ನೆಲೆ ಬಹುತೇಕ ರೈತರು ಇಳಕಲ್ ಮಾರುಕಟ್ಟೆಗೆ ಹೆಸರು ಉತ್ಪನ್ನ ಸಾಗಿಸುತ್ತಿರುವುದು ಗೊತ್ತಾಗಿದೆ ಎಂದು ಎಪಿಎಂಸಿ ಕಾರ್ಯದರ್ಶಿ ನೀಲಪ್ಪ ಶೆಟ್ಟಿ ತಿಳಿಸಿದ್ದಾರೆ.