ಗಂಗಾವತಿ:ಲೋಕಕಲ್ಯಾಣಾರ್ಥ ಹಮ್ಮಿಕೊಳ್ಳಲಾಗಿದ್ದ ಶ್ರೀನಿವಾಸ ಕಲ್ಯಾಣೋತ್ಸವದಲ್ಲಿ ಪೆಂಡಾಲ್ ಕುಸಿದು ಬಿದ್ದು ಮಹಿಳೆಯೊಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿ, ಐವರು ಗಾಯಗೊಂಡ ಘಟನೆ ತಾಲ್ಲೂಕಿನ ಮುಸ್ಟೂರು ಕ್ಯಾಂಪಿನಲ್ಲಿ ನಡೆದಿದೆ. ಗ್ರಾಮದ ಶ್ರೀರಾಮದೇವರ ದೇವಸ್ಥಾನದಲ್ಲಿ ಕಳೆದ ಮೂರು ದಿನಗಳಿಂದ ಹಮ್ಮಿಕೊಳ್ಳಲಾಗಿದ್ದ ಶ್ರೀನಿವಾಸ ಕಲ್ಯಾಣೋತ್ಸವದ ಸಮಾರೋಪ ದಿನವಾದ ಇಂದು (ಶುಕ್ರವಾರ) ಘಟನೆ ಸಂಭವಿಸಿದೆ. ಪ್ರಗತಿ ನಗರದ ಅಂಜಿನಮ್ಮ ಜಂಗಲೆಮ್ಮ (45) ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಗಾಯಗೊಂಡವರನ್ನು ಮರಳಿ-ಪ್ರಗತಿನಗರದ ಶೃತಿ, ಶಾರದಾ, ಶಮೀದಾಬೀ, ದುರ್ಗಮ್ಮ ಹಾಗೂ ಬಸವರಾಜ ಎಂದು ಗುರುತಿಸಲಾಗಿದೆ. ಇವರೆಲ್ಲರೂ 27 ವರ್ಷದಿಂದ 45 ವರ್ಷದೊಳಗಿನವರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಗಾಯಾಳುಗಳನ್ನು ಗಂಗಾವತಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಮುಸ್ಟೂರು ಕ್ಯಾಂಪ್ ಗ್ರಾಮದಲ್ಲಿ ನಡೆಯುತ್ತಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದ ಜನರಿಗೆ ಅಡುಗೆ ತಯಾರಿಸಿ ಬಡಿಸಲು ಇವರೆಲ್ಲರೂ ಬಂದಿದ್ದರು ಎನ್ನಲಾಗಿದೆ.
ರಾಮ ಮಂದಿರದ ಆವರಣದಲ್ಲಿ ಪೆಂಡಾಲ್ ಹಾಕಲಾಗಿತ್ತು. ಮಧ್ಯಾಹ್ನ ಬೀಸಿದ ಭಾರಿ ಪ್ರಮಾಣದ ಗಾಳಿಗೆ ಪೆಂಡಾಲ್ ಹರಿದು ಇವರ ಮೇಲೆ ಬಿದ್ದಿದ್ದೆ. ಪೆಂಡಾಲ್ ಬಿದ್ದ ರಭಸಕ್ಕೆ ಅಂಜಿನೆಮ್ಮ ಸ್ಥಳದಲ್ಲಿಯೇ ಸಾವನ್ನಪ್ಪಿದರೆ, ಮಿಕ್ಕವರು ಗಾಯಗೊಂಡಿದ್ದಾರೆ.