ಕುಷ್ಟಗಿ (ಕೊಪ್ಪಳ): ರಾಶಿ ಯಂತ್ರವನ್ನು ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಪಲ್ಟಿಯಾದ ಪರಿಣಾಮ ಓರ್ವ ಕೂಲಿಕಾರ ಮಹಿಳೆ ದುರ್ಮರಣಕ್ಕೀಡ್ಡಾಗಿದ್ದು, ಇಬ್ಬರು ಮಹಿಳೆಯರು ಗಾಯಗೊಂಡಿರುವ ಘಟನೆ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಚಳಗೇರಾ ಗ್ರಾಮದಲ್ಲಿ ಸಂಭವಿಸಿದೆ.
ಅನ್ನಕ್ಕ ಯಲ್ಲಪ್ಪ ಚಲವಾದಿ (30) ಮೃತ ಮಹಿಳೆ. ಚಳಗೇರಾ ಗ್ರಾಮದ ಹೊರವಲಯದ ಸೋಮಶೇಖರ ವೈಜಾಪೂರ ಅವರ ತೋಟಕ್ಕೆ ರಾಶಿಗಾಗಿ ಹೋಗುತ್ತಿದ್ದ ವೇಳೆ ಈ ಘಟನೆ ನಡೆದಿದೆ. ದ್ಯಾಮಣ್ಣ ಬಿಂಗಿ ಚಲಾಯಿಸುತ್ತಿದ್ದ ಟ್ರ್ಯಾಕ್ಟರ್ ಎಂಜಿನ್ಗೆ ಜೋಡಿಸಿದ್ದ ರಾಶಿಯಂತ್ರದ ಮೇಲೆ ಮೂವರು ಮಹಿಳೆಯರು ಕುಳಿತಿದ್ದ ವೇಳೆ ಇಂಜಿನ್ ಸಮೇತ ಟ್ರ್ಯಾಕ್ಟರ್ ಮುಳ್ಳುಕಂಟಿಯಲ್ಲಿ ಪಲ್ಟಿಯಾಗಿ ಬಿದ್ದಿದೆ.
ರಾಶಿ ಯಂತ್ರದ ಅಡಿಯಲ್ಲಿ ಸಿಲುಕಿದ್ದ ಮೂವರು ಮಹಿಳೆಯರ ಚೀರಾಟಕ್ಕೆ ಸ್ಥಳೀಯರು ದೌಡಾಯಿಸಿದ್ದಾರೆ. ಜೆಸಿಬಿ ಮೂಲಕ ರಾಶಿಯಂತ್ರ ಮೇಲಕ್ಕೆತ್ತಿ, ಅಡಿಯಲ್ಲಿದ್ದ ಮೂವರು ಮಹಿಳೆಯರನ್ನು ಹೊರಗೆ ತೆಗೆದಿದ್ದಾರೆ. ನಂತರ ಕುಷ್ಟಗಿ ಸರ್ಕಾರಿ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ತೀವ್ರವಾಗಿ ಗಾಯಗೊಂಡಿದ್ದ ಅನ್ನಕ್ಕ ಚಲವಾದಿ ಮೃತಪಟ್ಟಿದ್ದಾಳೆ.