ಕೊಪ್ಪಳ ಲೋಕಸಭಾ ಅಖಾಡ ಈ ಬಾರಿ ರಂಗೇರಿದೆ. ಹ್ಯಾಟ್ರಿಕ್ ಜಯ ಸಾಧಿಸಲು ಬಿಜೆಪಿ ಹವಣಿಸುತ್ತಿದೆ. ಪ್ರಬಲ ಪೈಪೋಟಿ ನೀಡುತ್ತಿರುವ ಕಾಂಗ್ರೆಸ್ ಪಾಳಯ, ಗೆಲುವಿನ ದಡ ಮುಟ್ಟಲು ನಾನಾ ಕಸರತ್ತು ನಡೆಸಿದೆ. ಆದರೆ, ಕ್ಷೇತ್ರವಾರು ಮತ ಲೆಕ್ಕಾಚಾರ ಬೇರೆಯದ್ದೇ ಭವಿಷ್ಯ ನುಡಿದಿದೆ.
ಕೊಪ್ಪಳ ಲೋಕಸಭಾ ಕ್ಷೇತ್ರದ ಚುನಾವಣಾ ಫಲಿತಾಂಶ ಈ ಭಾರಿ ಕುತೂಹಲ ಮೂಡಿಸಿದೆ. ಕ್ಷೇತ್ರವನ್ನು ಉಳಿಸಿಕೊಳ್ಳಲು ಬಿಜೆಪಿ ಶತಾಯಗತಾಯ ಪ್ರಯತ್ನ ಮಾಡಿದೆ. ಇನ್ನು ಕೈಬಿಟ್ಟು ಹೋಗಿರುವ ಕ್ಷೇತ್ರವನ್ನು ಮರಳಿ ಪಡೆಯಲು ಕಾಂಗ್ರೆಸ್ ಹಲವು ರಾಜಕೀಯ ತಂತ್ರ ಹೂಡಿದೆ. ಬಿಜೆಪಿ ಅಭ್ಯರ್ಥಿ ಕರಡಿ ಸಂಗಣ್ಣ ಮತ್ತೊಮ್ಮೆ ಸಂಸದರಾಗುವ ತವಕದಲ್ಲಿದ್ದಾರೆ. ಇತ್ತ ಮೈತ್ರಿ ಅಭ್ಯರ್ಥಿ ರಾಜಶೇಖರ್ ಹಿಟ್ನಾಳ್ ಮೊದಲ ಸ್ಪರ್ಧೆಯಲ್ಲೇ ದೆಹಲಿಗೆ ಹಾರಲು ಕಸರತ್ತು ನಡೆಸಿದ್ದಾರೆ.
ಕೊಪ್ಪಳ ಜಿಲ್ಲಾಮಟ್ಟಕ್ಕೆ ಈ ಬಾರಿಯ ಚುನಾವಣೆ ಮೋದಿ ವರ್ಸಸ್ ಸಿದ್ದರಾಮಯ್ಯ ಅಂತಲೇ ಎನ್ನಬಹುದು. ಒಂದು ಕಾಲದಲ್ಲಿ ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಈ ಕ್ಷೇತ್ರವನ್ನು ಸತತ 2 ಬಾರಿ ಬಿಜೆಪಿ ಗೆದ್ದು ಬೀಗಿದೆ. 2014ರ ಚುನಾವಣೆಯಲ್ಲಂತೂ ಮೋದಿ ಅಲೆ ಭರ್ಜರಿಯಾಗೇ ವರ್ಕೌಟ್ ಆಗಿತ್ತು. ಈಗಿನ ಎಲೆಕ್ಷನ್ನಲ್ಲೂ ಬಿಜೆಪಿಗೆ ಮೋದಿ ಅಲೆಯೇ ಬ್ರಹ್ಮಾಸ್ತ್ರವಾಗಿದೆ. ಇದಕ್ಕೆ ಟಕ್ಕರ್ ಕೊಡಲು ಮಾಜಿ ಸಿಎಂ ಸಿದ್ದರಾಮಯ್ಯ ಅಖಾಡಕ್ಕೆ ಧುಮುಕ್ಕಿದ್ದಾರೆ. ತಮ್ಮ ಆಪ್ತ ರಾಜಶೇಖರ್ ಹಿಟ್ನಾಳ್ಗೆ ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಾಲದ್ದಕ್ಕೆ ಕ್ಷೇತ್ರಾದ್ಯಂತ ಭರ್ಜರಿ ಪ್ರಚಾರವನ್ನೂ ನಡೆಸಿದ್ದು ಕೊಪ್ಪಳ ದಿಗ್ಗಜ ನಾಯಕ ಪ್ರತಿಷ್ಠೆಗೆ ಕಾರಣವಾಗಿದೆ.