ಕುಷ್ಟಗಿ: ಪಟ್ಟಣದ ಎಪಿಎಂಸಿ ಯಾರ್ಡ್ ನ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತದ ಉಗ್ರಾಣದಲ್ಲಿ ಸರ್ಕಾರದ ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ಬಿಳಿ ಜೋಳದ ಖರೀದಿ ಕೇಂದ್ರ ತೆರೆಯಲಾಗಿದೆ.
ಇಲ್ಲಿ ಬಿಳಿ ಜೋಳದ ಆನ್ಲೈನ್ ನೋಂದಣಿ ಏ.20 ರಿಂದ ಏ.30ರ ವರೆಗೆ ಆನ್ಲೈನ್ ನೋಂದಣಿ ಮಾಡಿಕೊಳ್ಳಲಾಗುವುದು. ಬೆಳೆಯ ಖರೀದಿ ಪ್ರಕ್ರಿಯೆ ಮೇ.1 ರಿಂದ ಮೇ.31ರ ವರೆಗೂ ಇಲ್ಲಿಯೇ ನಡೆಯಲಿದೆ. ನೋಂದಣಿಗೆ ಸದ್ಯ ಕೇವಲ 8 ದಿನಗಳ ಕಾಲಾವಧಿ ಇರುವ ಹಿನ್ನೆಲೆಯಲ್ಲಿ ಮೇ ತಿಂಗಳಲ್ಲಿ ಕಾಲಾವಧಿ ವಿಸ್ತರಿಸುವ ಸಾಧ್ಯತೆಗಳಿವೆ.
ಕುಷ್ಟಗಿಯಲ್ಲಿ ಸರ್ಕಾರದ ವತಿಯಿಂದ ಬಿಳಿ ಜೋಳದ ಖರೀದಿ ಕೇಂದ್ರ ಆರಂಭ ಹೈಬ್ರಿಡ್ ಜೋಳ ಪ್ರತಿ ಕ್ವಿಂಟಲ್ ಗೆ 2,550 ರೂ. ಬಿಳಿ ಜೋಳ (ಮಾಲ್ದಂಡಿ) 2,570 ರೂ. ಬೆಂಬಲ ಬೆಲೆ ನಿಗದಿ ಪಡಿಸಲಾಗಿದೆ. ರೈತರು ಫ್ರುಟ್ಸ್ ತಂತ್ರಾಂಶದ ಎಫ್ ಐಡಿ, ಬೆಳೆ ದರ್ಶಕದಲ್ಲಿ ಬಿಳಿ ಜೋಳದ ಬೆಳೆಯ ಹೆಸರು ನಮೂದಾಗಿರುವುದನ್ನು ಪರಿಗಣಿಸಲಾಗುವುದು.
ಸದ್ಯದ ಪರಿಸ್ಥಿತಿಯಲ್ಲಿ ರೈತರ ಬಳಿ ಇರುವ ಬಿಳಿ ಜೋಳದ ಉತ್ಪನ್ನವನ್ನು ಮಧ್ಯವರ್ತಿಗಳು ಕಡಿಮೆ ಬೆಲೆಗೆ ಖರೀದಿಸಿ, ಗ್ರಾಹಕರಿಗೆ ಹೆಚ್ಚಿನ ಬೆಲೆಗೆ ಮಾರುತ್ತಿರುವುದು ಸರಕಾರದ ಗಮನಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಬಿಳಿ ಜೋಳದ ಬೆಂಬಲ ಬೆಲೆ ಖರೀದಿ ಕೇಂದ್ರ ಕುಷ್ಟಗಿಯಲ್ಲಿ ಆರಂಭಿಸಲಾಗಿದೆ ಎಂದು ತಹಶೀಲ್ದಾರ್ ಎಂ.ಸಿದ್ದೇಶ ಮಾಹಿತಿ ನೀಡಿದರು.