ಗಂಗಾವತಿ:ತಾಲ್ಲೂಕಿನ ಆನೆಗೊಂದಿ ಸುತ್ತಲಿನ ಬೆಟ್ಟದ ಪ್ರದೇಶದಲ್ಲಿ ಹೆಚ್ಚಿದ್ದ ಚಿರತೆ ಹಾವಳಿ ಇದೀಗ ಬಯಲು ಪ್ರದೇಶದಲ್ಲೂ ಕಾಣಿಸಿಕೊಳ್ಳುವ ಮೂಲಕ ಜನರಲ್ಲಿ ಆತಂಕ ಮೂಡಿಸಿದೆ.
ಮೃತ ಮುಂಗುಸಿ ಪತ್ತೆ.. ಚಿರತೆ ಕೊಂದು ಬಿಸಾಕಿರುವ ಶಂಕೆ..
ಗಂಗಾವತಿ ತಾಲ್ಲೂಕಿನ ಆನೆಗೊಂದಿ ಸುತ್ತಲಿನ ಬೆಟ್ಟದ ಪ್ರದೇಶದಲ್ಲಿ ಚಿರತೆ ಹಾವಳಿ ಹೆಚ್ಚಿದ್ದು, ಪರಿಶೀಲಿಸಲು ಹೋದ ಗ್ರಾಮಸ್ಥರಿಗೆ ಚಿರತೆ ತಿಂದುಬಿಟ್ಟ ಮುಂಗುಸಿಯ ಅರೆಬರೆ ದೇಹ ಕಂಡು ಬಂದಿದೆ.
ಕನಕಗಿರಿ ತಾಲ್ಲೂಕಿನ ಸುಳೆಕಲ್ ಗ್ರಾಮದಲ್ಲಿ ಚಿರತೆ ಕಂಡಿರುವುದಾಗಿ ರೈತನೊಬ್ಬ ತಿಳಿಸಿದ್ದು, ಇದೀಗ ಪಂಚಾಯಿತಿಯಿಂದ ಅಧಿಕೃತ ಪ್ರಕಟಣೆ ಹೊರಡಿಸಿ ಜನರು ಜಾಗೃತಿಯಿಂದ ಇರುವಂತೆ ಸೂಚನೆ ನೀಡಲಾಗಿದೆ. ಚಿರತೆ ಕಾಣಿಸಿಕೊಂಡಿತ್ತು ಎನ್ನಲಾಗಿದ್ದ ಸ್ಥಳಕ್ಕೆ ಕನಕಗಿರಿ ತಹಸೀಲ್ದಾರ್ ರವಿ ಅಂಗಡಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.
ಗ್ರಾಮದ ಹೊರವಲಯದ ಜಮೀನಿನಲ್ಲಿ ಚಿರತೆ ಇರುವುದು ರೈತನೊಬ್ಬನ ಗಮನಕ್ಕೆ ಬಂದಿದ್ದು, ಬಳಿಕ ಊರಿನವರಿಗೆ ಮಾಹಿತಿ ನೀಡಿದ್ದಾನೆ. ಗ್ರಾಮಸ್ಥರು ಆತಂಕಗೊಂಡು ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಚಿರತೆಯು ಮುಂಗುಸಿಯೊಂದನ್ನು ಕೊಂದು ಅರೆಬರೆ ತಿಂದು ಹಾಕಿರುವುದು ಕಂಡು ಬಂದಿದೆ.