ಕೊಪ್ಪಳ: ಕೋವಿಡ್ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿದೆ. ಜನರು ಸೋಂಕು ಲಕ್ಷಣ ಕಂಡು ಬಂದ ಕೂಡಲೇ ಪರೀಕ್ಷೆಗೊಳಪಟ್ಟು, ಸೋಂಕು ತಗುಲಿರುವುದು ದೃಢಪಟ್ಟರೆ ಚಿಕಿತ್ಸೆಗೊಳಗಾಗುತ್ತಿದ್ದಾರೆ. ಆದ್ರೆ, ಕೆಲವರಲ್ಲಿ ಸೋಂಕಿನ ಲಕ್ಷಣಗಳಿದ್ದರೂ ಆರ್ಟಿಪಿಸಿಆರ್ ಪರೀಕ್ಷೆಯಲ್ಲಿ ನೆಗಟಿವ್ ವರದಿ ಬರುತ್ತಿದೆ.
ಹೀಗಾಗಿ, ಸಿಟಿ ಸ್ಕ್ಯಾನ್ ಮಾಡಿಸಬೇಕು ಎಂದು ವೈದ್ಯರು ಹೇಳುತ್ತಾರೆ. ಆರ್ಟಿಪಿಸಿಆರ್ ಪರೀಕ್ಷೆಯ ಕಿಟ್ಗಳ ಗುಣಮಟ್ಟದಲ್ಲಿ ಏನಾದರೂ ವ್ಯತ್ಯಾಸಗಳಿವೆಯಾ? ಎಂಬ ಮಾತುಗಳು ಕೇಳಿಬರುತ್ತಿವೆ. ಆದ್ರೆ, ಕಿಟ್ಗಳ ಗುಣಮಟ್ಟ ಪರೀಕ್ಷಿಸಿದ ಬಳಿಕವೇ ರವಾನೆಯಾಗುತ್ತವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೋವಿಡ್ ಎರಡನೇ ಅಲೆ ವ್ಯಾಪಕವಾಗಿ ಹರುಡುತ್ತಿದ್ದು, ಜನರಲ್ಲಿ ಭಯದ ವಾತಾವರಣ ಮೂಡಿಸಿದೆ. ಕೊರೊನಾ ಸೋಂಕು ತಗುಲಿದೆಯಾ ಎಂಬುದನ್ನು ಪರೀಕ್ಷೆಯ ಮೂಲಕ ಕಂಡು ಹಿಡಿಯಲಾಗುತ್ತದೆ.
ಈ ಮೊದಲು ಆರ್ಟಿಪಿಸಿಆರ್ ಪರೀಕ್ಷಾ ವರದಿ ನಿಖರವಾಗಿರುತ್ತದೆ ಎಂದು ಹೇಳುತ್ತಿದ್ದರು. ಆದರೆ, ಇತ್ತೀಚಿನ ದಿನಗಳಲ್ಲಿ ಕೊರೊನಾ ಸೋಂಕಿನ ಲಕ್ಷಗಳಿರುವ ಕೆಲವರ ಸ್ಯಾಂಪಲ್ ಪರೀಕ್ಷೆಯಲ್ಲಿ ನೆಗಟಿವ್ ಬರುತ್ತಿದೆ ಎನ್ನಲಾಗುತ್ತಿದೆ.
ಇದಕ್ಕೆ ಹಲವಾರು ಕಾರಣಗಳು ಕೂಡ ಇರಬಹುದು. ಆದರೆ, ಆರ್ಟಿಪಿಸಿಆರ್ ಕಿಟ್ಗಳ ಗುಣಮಟ್ಟದಲ್ಲಿ ಏನಾದರೂ ವ್ಯತ್ಯಾಸಗಳಿಂದ ಹೀಗೆ ಬರುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ, ಈ ಬಗ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ಕಿಟ್ ಗುಣಮಟ್ಟದಲ್ಲಿ ಏನೂ ವ್ಯತ್ಯಾಸವಿಲ್ಲ ಎನ್ನುತ್ತಾರೆ.