ಕೊಪ್ಪಳ : ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜನರ ಮುಂದೆ ನಮ್ಮ ಸರ್ಕಾರ ಮಾಡಿರುವ ಅಭಿವೃದ್ಧಿ ಕೆಲಸಗಳ ರಿಪೋರ್ಟ್ ಕಾರ್ಡ್ ಇಟ್ಟು ಮತ ಕೇಳುತ್ತೇವೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಹೇಳಿದ್ದಾರೆ. ಜಿಲ್ಲೆಯ ಕುಷ್ಟಗಿಯಲ್ಲಿ ಇಂದು ಹಮ್ಮಿಕೊಂಡಿದ್ದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದ ಉದ್ದಗಲಕ್ಕೆ ನಾಲ್ಕು ರಥಯಾತ್ರೆಗಳು ನಡೆಯುತ್ತಿವೆ. ಈ ರಥಯಾತ್ರೆ ರಾಜ್ಯದ 224 ಕ್ಷೇತ್ರಗಳಲ್ಲಿ ಸಂಚರಿಸಲಿದೆ. ಈಗಾಗಲೇ 100 ಕ್ಷೇತ್ರಗಳಲ್ಲಿ ಸಂಕಲ್ಪ ಯಾತ್ರೆ ಸಂಚಾರ ಮುಗಿದಿದೆ. ರಥಯಾತ್ರೆಗೆ ಸಿಗುತ್ತಿರುವ ಜನಬೆಂಬಲ ಮತ್ತೆ ಗೆಲುವಿನ ವಿಶ್ವಾಸ ಮೂಡಿಸಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಹಾಗೂ ಸಿಎಂ ಬಸವರಾಜ ಬೊಮ್ಮಾಯಿ ಸರ್ಕಾರದ ಮೇಲೆ ಜನರು ಭರವಸೆ ಇಟ್ಟಿದ್ದಾರೆ. ಇಷ್ಟೊಂದು ಜನ ಬೆಂಬಲ ವ್ಯಕ್ತವಾಗೋದು ಮತ್ತೆ ಅಧಿಕಾರಕ್ಕೆ ಬರೋದು ಸಾಧ್ಯವಿದ್ದಾಗ ಮಾತ್ರ ಎಂದು ಹೇಳಿದರು.
ಅಂಜನಾದ್ರಿ ಅಭಿವೃದ್ಧಿಗೆ 100 ಕೋಟಿ ನೀಡಲಾಗಿದೆ: ದೇಶದಲ್ಲಿ ಮೊದಲು ಟಾಯ್ಸ್ ಕ್ಲಸ್ಟರ್ ಕೊಪ್ಪಳದ ಬಾಣಾಪುರದಲ್ಲಿ ಆರಂಭವಾಗುತ್ತದೆ. ಹಾಗಾಗಿ ಕೊಪ್ಪಳ ಸೇರಿದಂತೆ ಸುತ್ತಮುತ್ತಲ ಜನರಿಗೆ ಪರೋಕ್ಷವಾಗಿ ಒಂದು ಲಕ್ಷ ಉದ್ಯೋಗ ಸಿಗುವ ಸಾಧ್ಯತೆ ಇದೆ. ಅಂಜನಾದ್ರಿಯನ್ನು ರಾಮಾಯಣ ಸರ್ಕ್ಯೂಟ್ ಗೆ ಜೋಡಿಸುತ್ತೇವೆ. ಅಂಜನಾದ್ರಿ ಅಭಿವೃದ್ಧಿಗೆ ಈಗಾಗಲೇ 100 ಕೋಟಿ ರೂಪಾಯಿ ನೀಡಲಾಗಿದೆ ಎಂದು ಸಿ ಟಿ ರವಿ ತಿಳಿಸಿದರು.
ಕೊಪ್ಪಳ ಜಿಲ್ಲೆಯ ತಳಕಲ್ ಸೇರಿದಂತೆ ರಾಜ್ಯದ 7 ಸರ್ಕಾರಿ ಇಂಜಿನಿಯರಿಂಗ್ ಕಾಲೇಜ್‌ಗಳನ್ನು ಐಐಟಿ ಮಾದರಿಯಲ್ಲಿ ಅಭಿವೃದ್ಧಿ ಮಾಡಲಾಗುತ್ತಿದೆ. ಯಾವುದೇ ವಿಧಾನಸಭಾ ಕ್ಷೇತ್ರಕ್ಕೆ ಹೋದರೆ ಶೇಕಡಾ 80 ರಷ್ಟು ಭಾರತೀಯ ಜನತಾ ಪಾರ್ಟಿಯ ಸರ್ಕಾರದ ಫಲಾನುಭವಿಗಳು ಸಿಗುತ್ತಾರೆ. ಅವರನ್ನೆಲ್ಲ ಮತದಾರರನ್ನಾಗಿ ಪರಿವರ್ತಿಸಿದರೆ ಬಿಜೆಪಿಗೆ ಸೋಲೆಂಬುದೇ ಇಲ್ಲ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ನಿಯತ್ತು, ನೀತಿ ಹಾಗೂ ನೇತೃತ್ವ ಈ ಮೂರು ನೀತಿಗಳನ್ನಿಟ್ಟುಕೊಂಡು ಕೆಲಸ ಆರಂಭಿಸಿದ್ದೇವೆ. ನಮ್ಮದು ಕುಟುಂಬ ನೀತಿಯಲ್ಲ, ಸಬ್ ಕಾ ಸಾಥ್ ಸಬ್ ಕಾ ವಿಶ್ವಾಸ್ ಇದು ನಮ್ಮ ನೀತಿ. ಒಂದು ಕಣ್ಣಿಗೆ ಸುಣ್ಣ ಇನ್ನೊಂದು ಕಣ್ಣಿಗೆ ಬಣ್ಣ ಇದು ಕಾಂಗ್ರೆಸ್ ನೀತಿ. ಕಟ್ಟ ಕಡೆಯ, ದಲಿತರಿಗೆ ಬಲ ಕೊಡುವುದು ಬಿಜೆಪಿ ನೀತಿ. ಸಾಂಸ್ಕೃತಿಕ ಪುನರುತ್ಥಾನದ ಅಂಗವಾಗಿ ಆಕ್ರಮಣಕಾರರ ಇತಿಹಾಸವೇ ಭಾರತದ ಇತಿಹಾಸ ಎಂದು ಕಾಂಗ್ರೆಸ್ ಬಿಂಬಿತ ಮಾಡಿತ್ತು. ನಮ್ಮ ಬಿಜೆಪಿ ಸರ್ಕಾರದ ನೇತೃತ್ವ ಹೇಳಿ ಹೊಗಳಿಸಿಕೊಳ್ಳುವಂತಹದ್ದಲ್ಲ. ನಮ್ಮ ನೇತಾರರ ನಾಯಕತ್ವವನ್ನು ಗುರುತಿಸಿ ಗೌರವಿಸುತ್ತಾರೆ ಎಂದರು.