ಕೊಪ್ಪಳ: ನಾವೇನು ದನ ಕಾಯಲು ಬಂದಿಲ್ಲ, ರೈತರ ಪರವಾಗಿ ಬಂದಿದ್ದೇವೆ ಎಂದು ಸಚಿವರೆದುರೇ ಕುಷ್ಟಗಿ ಶಾಸಕ ಅಮರೇಗೌಡ ಪಾಟೀಲ್ ಭಯ್ಯಾಪುರ ಅವರು ಗರಂ ಆಗಿದ್ದಾರೆ.
ನಾವೇನು ದನ ಕಾಯೋಕ್ ಬಂದಿಲ್ಲ: ಅಧಿಕಾರಿಗಳಿಗೆ ಬೆವರಿಳಿಸಿದ ಶಾಸಕ ಅಮರೇಗೌಡ - kannadanews
ಕೊಪ್ಪಳದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಶಾಸಕ ಅಮರೇಗೌಡ ಪಾಟೀಲ್ ಭಯ್ಯಾಪುರ ಹಿರಿಯ ಭೂ ವಿಜ್ಞಾನಿ ರಾವಳ್ ಅವರ ವಿರುದ್ಧ ಗರಂ ಆದ್ರು. ಮರಳು ಸಾಗಣೆಗೆ ಸಂಬಂಧಿಸಿದಂತೆ ಸಭೆಯಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಗಣಿ ಮತ್ತು ಭೂವಿಜ್ಞಾನ ಇಲಾಖೆ ಸಚಿವ ರಾಜಶೇಖರ್ ಪಾಟೀಲ್ ಅವರು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ಅಧಿಕಾರಿಗಳೊಂದಿಗೆ ಸಭೆ ನಡೆಸುತ್ತಿದ್ರು. ಸಭೆಗೆ ಹಾಜರಾದ ಶಾಸಕ ಅಮರೇಗೌಡ ಪಾಟೀಲ್ ಭಯ್ಯಾಪುರ ಅವರು ಹಿರಿಯ ಭೂ ವಿಜ್ಞಾನಿ ರಾವಳ್ ಅವರಿಗೆ ಬೆವರಿಳಿಸಿದರು. ಕುಷ್ಟಗಿ ಕ್ಷೇತ್ರದಲ್ಲಿ ಮರಳಿನ ಸಮಸ್ಯೆ ಇದೆ. ಸಾಮಾನ್ಯ ಜನರಿಗೆ ಮರಳು ಸಿಗುತ್ತಿಲ್ಲ. ರಾಜಸ್ವ ತೆಗೆದುಕೊಂಡು ಮರಳು ಕೊಡಿ. ನಮಗೆ ಹಳ್ಳದಿಂದ, ನದಿಯಿಂದ ಮರಳು ತರಲು ಸಾಧ್ಯವಿಲ್ಲ. ಇಲ್ಲ ಅಂದ್ರ ನಾವು ಕಳವು ಮಾಡ್ತೀವಿ. ನೀವು ಯಾವುದಕ್ಕಾದರೂ ಅನುವು ಮಾಡಿಕೊಡಿ ಎಂದು ಗುಡುಗಿದರು.
ಒಂದು ಟ್ರ್ಯಾಕ್ಟರ್ ಮರಳಿಗೆ 25 ಸಾವಿರ ರೂಪಾಯಿ ದಂಡ ಹಾಕುತ್ತಾರೆ. ದಂಡ ಹಾಕಲು ಕಾನೂನು ಇದ್ದರೆ ಅದರ ಒಂದು ಪ್ರತಿ ಕೊಡಿ ಎಂದು ಸಚಿವರಿಗೆ ಕೇಳಿದ್ರು. ಈ ಸಂದರ್ಭದಲ್ಲಿ ಮಧ್ಯೆ ಮಾತನಾಡಲು ಬಂದ ಹಿರಿಯ ಭೂ ವಿಜ್ಞಾನಿ ರಾವಳ್ ಅವರನ್ನು ತರಾಟೆಗೆ ತೆಗೆದುಕೊಂಡರು. ನಾವು ದನ ಕಾಯಲು ಬಂದಿಲ್ಲ, ರೈತರ ಋಣ ನಮ್ಮ ಮೇಲಿದೆ. ಅಧಿಕಾರಿಗಳು ಒಂದು ದಿನಾನೂ ಯಾವುದೇ ಗ್ರಾಮಕ್ಕೆ ಹೋಗಲ್ಲ. ಒಂದೂ ಕೇಸೂ ಮಾಡಲ್ಲ ಎಂದು ಅಧಿಕಾರಿ ವಿರುದ್ಧ ಸಚಿವರ ಮುಂದೆ ಶಾಸಕ ಭಯ್ಯಾಪುರ ಆರೋಪಿಸಿದ್ರು.