ಗಂಗಾವತಿ(ಕೊಪ್ಪಳ): ತುಂಗಭದ್ರಾ ಎಡದಂಡೆಯ ಮುಖ್ಯ ಕಾಲುವೆಗೆ ರಂಧ್ರ ಕೊರೆದು ಅನಧಿಕೃತವಾಗಿ ಪೈಪ್ಲೈನ್ ಅಳವಡಿಸಿ ನೀರು ಕಳ್ಳತನ ಮಾಡಲಾಗುತ್ತಿದೆ ಎಂಬ ದೂರು ಬಂದ ಹಿನ್ನೆಲೆ ತಹಶೀಲ್ದಾರ್ ಮಂಜುನಾಥ ಹಿರೇಮಠ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ತಾಲೂಕಿನ ದಾಸನಾಳ ಬಳಿ ಹಾದು ಹೋಗಿರುವ ತುಂಗಭದ್ರಾ ಎಡದಂಡೆ ಕಾಲುವೆಯಿಂದ ಪೈಪ್ಲೈನ್ ಅಳವಡಿಸಿ ನೀರನ್ನು ಕದಿಯುತ್ತಿರುವ ಮಾಹಿತಿ ಗೊತ್ತಾಗಿ ಸ್ಥಳಕ್ಕೆ ತಹಶೀಲ್ದಾರ್ ಹಾಗೂ ನೀರಾವರಿ ಇಲಾಖೆಯ ಅಧಿಕಾರಿಗಳು ಆಗಮಿಸಿ ವಿವಿಧ ಕಡೆ ಪರಿಶೀಲನೆ ಮಾಡಿದರು.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ತಹಶೀಲ್ದಾರ್ ಮಂಜುನಾಥ್ ಹಿರೇಮಠ, ಮೇಲ್ಭಾಗದಲ್ಲಿ ನೀರು ಕಳ್ಳತನ ಮಾಡುತ್ತಿರುವ ಪರಿಣಾಮ ರಾಯಚೂರಿನವರೆಗೆ ತಲುಪಬೇಕಿರುವ ಕುಡಿಯುವ ಮತ್ತು ಕೃಷಿ ಚಟುವಟಿಕೆಯ ಉದ್ದೇಶದ ನೀರಿನ ಪ್ರಮಾಣದಲ್ಲಿ ಕಡಿಮೆಯಾಗುತ್ತಿದೆ ಎಂಬ ದೂರು ಕೇಳಿ ಬಂದಿವೆ. ಈ ಹಿನ್ನೆಲೆ ಸ್ಥಳಕ್ಕೆ ತೆರಳಿ ಪರಿಶೀಲನೆ ಮಾಡಲಾಗಿದ್ದು, ಮೇಲ್ನೋಟಕ್ಕೆ ಯಾವುದೇ ಪ್ರಕರಣಗಳು ಪತ್ತೆಯಾಗಿಲ್ಲ. ಅಲ್ಲದೇ ನಮ್ಮ ಭಾಗದಲ್ಲಿ ಹರಿಯುವ ಕಾಲುವೆಯಲ್ಲಿನ ನೀರಿನ ಪ್ರಮಾಣ 13 ಗೇಜ್ ಪಾಯಿಂಟ್ ಇರಬೇಕು ಎಂದು ನೀರಾವರಿ ಇಲಾಖೆ ಮಾನದಂಡ ನಿಗದಿ ಪಡಿಸಿದರೂ, ದಾಸನಾಳದ ಬಳಿ ವಾಟರ್ ಗೇಜ್ಪಾಯಿಂಟ್ಗೆ ಭೇಟಿ ನೀಡಿದಾಗ 13 ಪಾಯಿಂಟ್ ನೀರಿನ ಹರಿವಿತ್ತು ಎಂದು ತಿಳಿಸಿದರು.
ಕಾಲುವೆಯಲ್ಲಿನ ನೀರು ಸಮರ್ಪಕ ನಿರ್ವಹಣೆಗಾಗಿ ಜಿಲ್ಲಾಧಿಕಾರಿ, ನಾನಾ ಇಲಾಖೆಯ ಅಧಿಕಾರಿಗಳ ನೇತೃತ್ವದಲ್ಲಿ ಟಾಸ್ಕಪೋರ್ಸ್ ಸಮಿತಿ ರಚಿಸಿದ್ದಾರೆ. ಈ ತಂಡವು ಕಾಲುವೆ ಮೇಲೆ ನಿರಂತರ ಗಸ್ತು ತಿರುಗಿ ಕಣ್ಗಾವಲು ಇರಿಸಲಿದೆ ಎಂದು ತಹಶೀಲ್ದಾರ್ ಹೇಳಿದರು. ಈ ಸಂದರ್ಭದಲ್ಲಿ ವಡ್ಡರಹಟ್ಟಿ ನಂಬರ್-2 ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಎಂ.ಎಸ್. ಗೋಡೆಕರ್ ಇದ್ದರು.