ಕೊಪ್ಪಳ:ಜಿಲ್ಲೆಯಲ್ಲಿಯೂ ಈ ಬಾರಿ ಉತ್ತಮ ಮಳೆಯಾಗಿದ್ದು, ಇದರಿಂದಾಗಿ ಬಹುತೇಕ ಕೆರೆ-ಕಟ್ಟೆಗಳು ತುಂಬಿ ತುಳುಕುತ್ತಿವೆ. ಆದರೆ, ಚಿತ್ರನಟ ಯಶ್ ಅವರ ಯಶೋಮಾರ್ಗ ಫೌಂಡೇಷನ್ ಮೂಲಕ ಪುನಶ್ಚೇತನಗೊಳಿಸಿದ್ದ ತಲ್ಲೂರು ಕೆರೆಗೆ ಮಾತ್ರ ನೀರು ಬಂದಿಲ್ಲ.
ಯಶೋಮಾರ್ಗದ ಮೂಲಕ ಪುನಶ್ಚೇತನಗೊಂಡಿದ್ದ ತಲ್ಲೂರು ಕೆರೆಗೆ ಬಾರದ ನೀರು... ಈ ಬಾರಿ ಸಾಕಷ್ಟು ಪ್ರಮಾಣದಲ್ಲಿ ಮಳೆಯಾದರೂ ಸಹ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ತಲ್ಲೂರು ಕೆರೆಗೆ ನೀರು ಹರಿದು ಬಂದಿಲ್ಲ. ಹೀಗಾಗಿ ಸುಮಾರು 96 ಎಕರೆ ವಿಸ್ತೀರ್ಣದ ಈ ಕೆರೆ ಈಗ ನೀರಿಲ್ಲದೆ ಖಾಲಿಖಾಲಿಯಾಗಿ ನಿಂತಿದೆ. ಇದಕ್ಕೆ ಕಾರಣ, ಈ ಕೆರೆಗೆ ನೀರು ಹರಿದು ಬರುವ ಮಾರ್ಗವನ್ನೇ ಮುಚ್ಚಿರೋದು.
ಈ ಭಾಗದಲ್ಲಿ ಗದಗ-ವಾಡಿ ರೈಲ್ವೇ ಲೈನ್ ಕಾಮಗಾರಿ ನಡೆಯುತ್ತಿದ್ದು, ಈ ಕಾಮಗಾರಿಯಿಂದಾಗಿಯೇ ಯಡವಟ್ಟಾಗಿದೆ. ತಲ್ಲೂರು ಕೆರೆಗೆ ಹರಿದು ಬರುತ್ತಿದ್ದ ನೀರಿನ ಮೂಲ ಮಾರ್ಗವನ್ನು ಬೇರೆ ಕಡೆ ತಿರುಗಿಸಲಾಗಿದೆ. ಹೀಗಾಗಿ ತಲ್ಲೂರು ಕೆರೆಗೆ ನೀರು ಹರಿದು ಬಂದಿಲ್ಲ. 2017 ರಲ್ಲಿ ನಟ ಯಶ್ ಅವರು ಸುಮಾರು 4 ಕೋಟಿ ರುಪಾಯಿ ವೆಚ್ಚದಲ್ಲಿ ತಮ್ಮ ಯಶೋಮಾರ್ಗ ಫೌಂಡೇಷನ್ ಮೂಲಕ ತಲ್ಲೂರು ಕೆರೆಯನ್ನು ಪುನಶ್ಚೇತನಗೊಳಿಸಿದ್ದರು.
ಬಳಿಕ ನೀರು ಹರಿದು ಬಂದು ಕೆರೆ ನೀರಿನಿಂದ ನಳನಳಿಸುತ್ತಿತ್ತು. ಅಲ್ಲದೆ ಸುತ್ತಮುತ್ತಲ ಹತ್ತಾರು ಗ್ರಾಮಗಳ ಜನರಿಗೆ ಅನುಕೂಲವಾಗಿತ್ತು. ಆದರೆ, ರೈಲ್ವೇ ಕಾಮಗಾರಿ ಮಾಡುವವರ ಯಡವಟ್ಟಿನಿಂದ ತಲ್ಲೂರು ಕೆರೆಗೆ ನೀರು ಹರಿದು ಬರುವ ಮಾರ್ಗವೇ ಬಂದ್ ಆಗಿದೆ. ಹೀಗಾಗಿ ತಲ್ಲೂರು ಕೆರೆ ಬರಿದಾಗಿಯೇ ಉಳಿದಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಾರೆ.