ಕೊಪ್ಪಳ :ವಾಲ್ಮೀಕಿ ನಾಯಕ ಸಮುದಾಯಕ್ಕೆ ಮೀಸಲಾತಿಯನ್ನು ಶೇ.7.5ಗೆ ಹೆಚ್ಚಿಸುವಂತೆ ಸಮುದಾಯದ ಮುಖಂಡರು ಆಗ್ರಹಿಸಿದ್ದಾರೆ.
ನಗರದ ಮೀಡಿಯಾ ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಾಲ್ಮೀಕಿ ನಾಯಕ ಸಮುದಾಯದ ಮುಖಂಡರು, ಇದೇ ಸೆಪ್ಟೆಂಬರ್ 21ರಂದು ನಡೆಯುವ ಅಧಿವೇಶನದಲ್ಲಿ ಶೇ.7.5 ಮೀಸಲಾತಿ ಅನುಷ್ಠಾನ ಮಾಡದಿದ್ರೆ ಸಮುದಾಯದ ಗುರುಗಳ ನೇತೃತ್ವದಲ್ಲಿ ವಿಧಾನಸೌಧ ಮುತ್ತಿಗೆ ಹಾಕಲಾಗುತ್ತದೆ ಎಂದು ಎಚ್ಚರಿಸಿದರು.
ರಾಜ್ಯದಲ್ಲಿ ಸುಮಾರು 70 ರಿಂದ 75 ಲಕ್ಷ ಜನಸಂಖ್ಯೆಯನ್ನು ವಾಲ್ಮೀಕಿ ಸಮುದಾಯ ಹೊಂದಿದೆ. ಸಮಾಜಕ್ಕೆ ಶಿಕ್ಷಣ, ಉದ್ಯೋಗದಲ್ಲಿ ಶೇ.7.5 ಮೀಸಲಾತಿ ಕಲ್ಪಿಸಬೇಕು. ಮೀಸಲಾತಿ ಹೆಚ್ಚಿಸುವ ಕುರಿತಂತೆ ಸರ್ಕಾರಕ್ಕೆ ಈಗಾಗಲೇ ಸಾಕಷ್ಟು ಬಾರಿ ಹೋರಾಟ, ಮನವಿ ಮಾಡಲಾಗಿದೆ.
ಆದರೂ ಸರ್ಕಾರ ಗಮನ ನೀಡುತ್ತಿಲ್ಲ. ಈ ಹಿನ್ನೆಲೆ ಮೀಸಲಾತಿ ಹೆಚ್ಚಿಸುವಂತೆ ಆಗ್ರಹಿಸಿ ರಾಜನಹಳ್ಳಿ ಗುರುಪೀಠದ ಗುರುಗಳ ನೇತೃತ್ವದಲ್ಲಿ ಹೋರಾಟ ಮಾಡಲಾಗುತ್ತದೆ ಎಂದರು. ನಕಲಿ ಜಾತಿ ಪ್ರಮಾಣ ಪತ್ರ ಪಡೆಯುವವರ ಮತ್ತು ನೀಡುವವರ ಮೇಲೆ ಕ್ರಮ ಕೈಗೊಳ್ಳಬೇಕು. ಜಿಲ್ಲೆಯಲ್ಲಿ ವಾಲ್ಮೀಕಿ ಅಭಿವೃದ್ಧಿ ನಿಗಮ ಪ್ರತ್ಯೇಕಿಸಬೇಕು ಎಂಬ ಬೇಡಿಕೆ ಸೇರಿ ಇನ್ನಿತರೆ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಆಗ್ರಹಿಸಿದರು.
ವಾಲ್ಮೀಕಿ ನಾಯಕ ಮಹಾಸಭಾದ ರಾಜ್ಯ ಸಂಘಟನಾ ಕಾರ್ಯದರ್ಶಿ ಸುರೇಶ ಡೊಣ್ಣಿ, ತಾಲೂಕು ಘಟಕದ ಅಧ್ಯಕ್ಷ ಶರಣಪ್ಪ ನಾಯಕ್, ಮುಖಂಡರಾದ ರುಕ್ಮಣ್ಣ ಶಾವಿ, ಮಲ್ಲಪ್ಪ ಬೇಲೇರಿ, ವಿಜಯೇಂದ್ರ ಬಿಸರಳ್ಳಿ ಸುದ್ದಿಗೋಷ್ಠಿಯಲ್ಲಿದ್ದರು.