ಗಂಗಾವತಿ: ನಾಗರಿಕ ಸೇವಾ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಗಂಗಾವತಿಯ ಯುವಕ ರ್ಯಾಂಕಿಂಗ್ ಪಟ್ಟಿಯಲ್ಲಿ 132ನೇ ಸ್ಥಾನ ಗಳಿಸಿದ್ದಾರೆ.
ಬಿಜೆಪಿಯ ಹಿರಿಯ ಮುಖಂಡ ಎಚ್. ಗಿರೇಗೌಡ ಅವರ ಸಹೋದರರ ಪುತ್ರ ಹೊಸಕೇರಿಯ ವಿನೋದ್ ಪಾಟೀಲ್ ಅವರಿಗೆ ಯುಪಿಎಸ್ಸಿಯಲ್ಲಿ 132ನೇ ರ್ಯಾಂಕ್ ಸಿಕ್ಕಿದ್ದು, ಕುಟುಂಬ ಸದಸ್ಯರ ಸಂತಸಕ್ಕೆ ಕಾರಣವಾಗಿದೆ.
2017ರಲ್ಲಿ ನಡೆದ ಯುಪಿಎಸ್ಸಿ ಪರೀಕ್ಷೆಯಲ್ಲಿ 294ನೇ ರ್ಯಾಂಕ್ ನಲ್ಲಿ ಉತ್ತೀರ್ಣರಾಗಿದ್ದ ವಿನೋದ್ ಪಾಟೀಲ್ ಸದ್ಯಕ್ಕೆ ಇಂಡಿಯನ್ ರೆವಿನ್ಯೂ ಸರ್ವೀಸ್ (ಐಆರ್ ಸ್)ನ ಆದಾಯ ತೆರಿಗೆ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಮಹಾರಾಷ್ಟ್ರದ ನಾಗಾಪೂರದಲ್ಲಿರುವ ಕೇಂದ್ರದಲ್ಲಿ ತರಬೇತಿ ಪಡೆಯುತ್ತಿದ್ದ ಅವರು, ಒಂದು ವರ್ಷ ರಜೆ ಪಡೆದು ಪುನಃ 2019ರಲ್ಲಿ ಯುಪಿಎಸ್ಸಿ ಪರೀಕ್ಷೆ ತೆಗೆದುಕೊಂಡಿದ್ದರು.
ಇದೀಗ 132ನೇ ರ್ಯಾಂಕ್ ಸಿಕ್ಕಿದ್ದು, ಐಪಿಎಸ್ ಶ್ರೇಣಿಯ ಹುದ್ದೆ ಸಿಗಲಿದೆ.
'ನನಗೆ ಜನರೊಂದಿಗೆ ಸಂಪರ್ಕ ಇರುವ ಹುದ್ದೆ ಪಡೆಯಬೇಕು ಎಂಬ ಆಸೆಯಿತ್ತು. ಆದಾಯ ಮತ್ತು ವೃತ್ತಿ ತೆರಿಗೆ ವಿಭಾಗದಲ್ಲಿ ಅದಕ್ಕೆ ಆಸ್ಪದ ಇರಲಿಲ್ಲ. ಹೀಗಾಗಿ ನಾನು ಒಂದು ವರ್ಷದ ರಜೆ ಪಡೆದು ಪುನಃ ಪರೀಕ್ಷೆ ಬರೆದಿದ್ದು ಇದೀಗ ಸಿಕ್ಕ ಫಲಿತಾಂತ ತೃಪ್ತಿ ತಂದಿದೆ' ಎಂದು ವಿನೋದ್ ಪಾಟೀಲ್ ಸಂತಸ ವ್ಯಕ್ತಪಡಿಸಿದ್ದಾರೆ.