ಕೊಪ್ಪಳ:ಮಳೆ ಪ್ರಾರಂಭವಾಗಿದ್ದರೂ ಜಿಲ್ಲೆಯಲ್ಲಿ ಬೇಸಿಗೆಯ ತಾಪ ತಗ್ಗಿಲ್ಲ.ಜಲಮೂಲಗಳೆಲ್ಲಾ ಬಹುತೇಕ ಬತ್ತಿಹೋಗಿದ್ದು, ಕುಡಿಯುವ ನೀರಿಗಾಗಿ ಜನ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
ಕೊಪ್ಪಳ, ಯಲಬುರ್ಗಾ, ಕುಕನೂರು ಸೇರಿದಂತೆ ಜಿಲ್ಲೆಯ ಇನ್ನಿತರೆ ತಾಲೂಕುಗಳ ಗ್ರಾಮೀಣ ಪ್ರದೇಶದಲ್ಲಿ ಶುದ್ಧ ಕುಡಿಯುವ ನೀರಿಗಾಗಿ ಜನ ನಿತ್ಯ ಸಂಕಟ ಅನುಭವಿಸುತ್ತಿದ್ದಾರೆ. ಅದ್ರಲ್ಲೂ ಕೊಪ್ಪಳದ ಕಟ್ಟಕಡೆಯ ಗ್ರಾಮವಾಗಿರುವ ಗುಡಗೇರಿಯಲ್ಲಿ ನೀರಿನ ಸಮಸ್ಯೆ ತೀವ್ರಗೊಂಡಿದೆ. ಆ ಗ್ರಾಮದಿಂದ ಸುಮಾರು 3 ಕಿಲೋ ಮೀಟರ್ ದೂರದಲ್ಲಿರುವ ಕೃಷಿಹೊಂಡದಲ್ಲಿ ಸಂಗ್ರಹವಾಗಿರುವ ನೀರೇ, ಗುಡಗೇರಿ ಗ್ರಾಮದ ಜನರ ದಾಹ ನೀಗಿಸುತ್ತಿದೆ.
ಎತ್ತಿನಬಂಡಿ, ಬೈಕ್, ಸೈಕಲ್ ಹಾಗೂ ಟ್ರ್ಯಾಕ್ಟರ್ ತೆಗೆದುಕೊಂಡು ಬಂದು ನೀರು ತರುವುದು ಅನಿವಾರ್ಯವಾಗಿದೆ. ವಾಹನಗಳಿದ್ದವರು ಹೇಗೋ ಇಷ್ಟು ದೂರ ಸಾಗಿ ನೀರು ತೆಗೆದುಕೊಂಡು ಹೋಗುತ್ತಾರೆ. ಆದರೆ, ವಾಹನ ಸೌಲಭ್ಯ ಇಲ್ಲದವರು ಪುಟ್ಟ ಮಕ್ಕಳಿಂದ ಹಿಡಿದು ವಯೋವೃದ್ಧರಾದಿಯಾಗಿ ಈ ಕೃಷಿಹೊಂಡಕ್ಕೆ ಬಂದು ಕುಡಿಯಲು ನೀರು ತರುವ ಪಾಡು ಹೇಳತೀರದು.