ಕೊಪ್ಪಳ :ಅವೈಜ್ಞಾನಿಕ ರಸ್ತೆಯಿಂದ ರಾಷ್ಟ್ರೀಯ ಹೆದ್ದಾರಿಯ ಬೈಪಾಸ್ ರಸ್ತೆಯಲ್ಲಿ ಸಾವಿಸ ಸಂಖ್ಯೆ ದಿನೇದಿನೆ ಹೆಚ್ಚಳವಾಗುತ್ತಿವೆ. ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಶವವಿಟ್ಟು ಪ್ರತಿಭಟನೆ ಮಾಡಿದ್ದಾರೆ.
ನಗರದ ಹೊರವಲಯದಲ್ಲಿರುವ ರಾಷ್ಟ್ರೀಯ ಹೆದ್ದಾರಿ 63ರ ಬೈಪಾಸ್ ರಸ್ತೆ ಇದೀಗ ಸಾವಿನ ರಸ್ತೆಯಾಗಿದೆ. ಅದರಲ್ಲೂ ಕೊಪ್ಪಳದಿಂದ ಚುಕ್ಕನಕಲ್ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಹೆದ್ದಾರಿಯನ್ನು ದಾಟಿಕೊಂಡು ಹೋಗಬೇಕು. ಅವೈಜ್ಞಾನಿಕ ರಸ್ತೆ ತಿರುವಿನಿಂದಾಗಿ ಕಳೆದೆರಡು ತಿಂಗಳಲ್ಲಿ ಸುಮಾರು 8 ಜನರು ಪ್ರಾಣ ಕಳೆದುಕೊಂಡಿದ್ದಾರೆ.
ಹೈವೇ ಆಗಿರುವುದರಿಂದ ವಾಹನಗಳ ಸಂಚಾರ ದಟ್ಟಣೆ ಹೆಚ್ಚಾಗಿರುತ್ತದೆ. ಜೊತೆಗೆ ವಾಹನಗಳು ಸಹ ಅತಿವೇಗದಲ್ಲಿರುತ್ತವೆ. ಆದರೆ, ಯಾವುದೇ ಫಲಕಗಳು ಹೆದ್ದಾರಿಯಲ್ಲಿಲ್ಲ. ಅಪಘಾತಗಳಾಗುತ್ತಿರುವ ಈ ತಿರುವಿನಲ್ಲಿ ಮುದ್ದಾಬಳ್ಳಿ, ಹ್ಯಾಟಿ, ಮುಂಡರಗಿ, ಮೆಳ್ಳಿಕೇರಿ ಸೇರಿದಂತೆ ನಾಲ್ಕೈದು ಗ್ರಾಮಗಳ ಜನರು ದಿನಂಪ್ರತಿ ವಿವಿಧ ಕೆಲಗಳಿಗೆ ಈ ರಸ್ತೆ ದಾಟಿಕೊಂಡು ಕೊಪ್ಪಳಕ್ಕೆ ಬಂದು ಹೋಗುತ್ತಾರೆ.