ಕೊಪ್ಪಳ :ಕೊರೊನಾ ಸೋಂಕಿನಿಂದಾಗಿ ನಗರ ಸೇರಿದಂತೆ ಗ್ರಾಮೀಣ ಪ್ರದೇಶಗಳು ತತ್ತರಿಸಿವೆ. ಕೊರೊನಾ ಸೋಂಕು ನಿಯಂತ್ರಿಸಲು ಜಿಲ್ಲಾಡಳಿತಗಳು ಹರಸಾಹಸ ಪಟ್ಟಿವೆ. ಗ್ರಾಮ ಪಂಚಾಯತ್‌ಗಳು ಹಲವು ಕ್ರಮಗಳ ಮೂಲಕ ಸೋಂಕು ಹರಡುವಿಕೆ ನಿಯಂತ್ರಿಸುವಲ್ಲಿ ಯಶಸ್ವಿಯಾಗಿವೆ.
ಕೊರೊನಾ ಸೋಂಕು ನಿಯಂತ್ರಣ, ನಿರ್ವಹಣೆಯಲ್ಲಿ ಅತ್ಯುತ್ತಮವಾಗಿ ಕೆಲಸ ಮಾಡಿದ ರಾಜ್ಯದ ಮೂರು ಗ್ರಾಮ ಪಂಚಾಯತ್‌ಗಳನ್ನು ಕೇಂದ್ರ ಸರ್ಕಾರ ಗುರುತಿಸಿ ಪ್ರಶಂಸಿದೆ. ರಾಜ್ಯದ ಮೂರು ಗ್ರಾಮ ಪಂಚಾಯತ್‌ಗಳ ಪೈಕಿ ಕೊಪ್ಪಳ ಜಿಲ್ಲೆಯ ಮುನಿರಾಬಾದ್ ಗ್ರಾ.ಪಂ ಸಹ ಒಂದಾಗಿದ್ದು ಪ್ರಶಂಸೆಗೆ ಪಾತ್ರವಾಗಿದೆ.
ಕೇಂದ್ರ ಸರ್ಕಾರದ ಪ್ರಶಂಸೆಗೆ ಪಾತ್ರವಾದ ಗ್ರಾಮ ಪಂಚಾಯಿತಿ ಕೊಪ್ಪಳ ತಾಲೂಕಿನ ಮುನಿರಾಬಾದ್ ಗ್ರಾಪಂ ಕೊರೊನಾ ನಿಯಂತ್ರಣ ಕ್ರಮದ ನಿರ್ವಹಣೆಯಲ್ಲಿ ಕೇಂದ್ರ ಸರ್ಕಾರದ ಪ್ರಶಂಸೆಗೆ ಪಾತ್ರವಾಗಿದೆ. 9 ಸಾವಿರ ಜನಸಂಖ್ಯೆ ಹೊಂದಿರುವ ಮುನಿರಾಬಾದ್ ಯೋಜನಾ ಗ್ರಾಮ ಬಳ್ಳಾರಿ ಜಿಲ್ಲೆಯ ಹೊಸಪೇಟೆಗೆ ಅತೀ ಸಮೀಪದಲ್ಲಿದೆ. ಕೊರೊನಾ ಸೋಂಕು ಹರಡುವಿಕೆ ತೀವ್ರತೆ ಇದ್ದ ಸಂದರ್ಭದಲ್ಲಿ ಕೊರೊನಾ ನಿಯಂತ್ರಣ ಮಾಡುವುದು ಅತ್ಯಂತ ಸವಾಲಿನ ಕೆಲಸವಾಗಿತ್ತು.
ಅಂತಹ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಟಾಸ್ಕ್ ಫೋರ್ಸ್ ಸಮಿತಿಯ ಶ್ರಮ ಅತ್ಯಂತ ಮಹತ್ವದ್ದಾಯಿತು. ಮುನಿರಾಬಾದ್ ಗ್ರಾಮದಲ್ಲಿ ಕೊರೊನಾ ಸೋಂಕಿನ ಮೊದಲ ಅಲೆಯಲ್ಲಿ 163 ಹಾಗೂ ಎರಡನೇ ಅಲೆಯಲ್ಲಿ 263 ಜನರಿಗೆ ಸೋಂಕು ತಗುಲಿ 12 ಜನರು ಸಾವನ್ನಪ್ಪಿದ್ದರು. ಹೆಚ್ಚು ಜನ ಸಂಚಾರವಿರುವ ಮುನಿರಾಬಾದ್ ಗ್ರಾಮದಲ್ಲಿ ಸೋಂಕು ಹರಡುವಿಕೆ ನಿಯಂತ್ರಣ ಮಾಡುವುದರಲ್ಲಿ ಗ್ರಾಮ ಪಂಚಾಯತ್ ಸಾಕಷ್ಟು ಶ್ರಮವಹಿಸಿತು.
ಕೇಂದ್ರ ಸರ್ಕಾರದ ಪ್ರಶಂಸೆಗೆ ಪಾತ್ರವಾದ ಗ್ರಾಪಂ ಆರೋಗ್ಯ ಇಲಾಖೆಯೊಂದಿಗೆ ಸಮನ್ವಯತೆ ಸಾಧಿಸಿ ಹಾಗೂ ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ಪಾಸಿಟಿವ್ ಪ್ರಕರಣಗಳನ್ನು ಕೋವಿಡ್ ಕೇರ್ ಸೆಂಟರ್ಗೆ ಸೇರಿಸುವುದು, ನಾಕಾಬಂದಿ ಹಾಕುವುದು, ಜನ ಸಂಚಾರ ನಿಯಂತ್ರಣ ಸೇರಿದಂತೆ ಹಲವಾರು ಕ್ರಮ ಕೈಗೊಂಡಿತು. ಈ ಮೂಲಕ ಕೊರೊನಾ ಹರಡುವಿಕೆಯನ್ನು ಯಶಸ್ವಿಯಾಗಿ ಮಾಡಿತು. ಕೊರೊನಾ ನಿಯಂತ್ರಣ, ನಿರ್ಹಣೆಯಲ್ಲಿ ಗ್ರಾಮ ಪಂಚಾಯತ್‌ಗಳ ಕುರಿತು ಕೇಂದ್ರ ಗ್ರಾಮೀಣಾಭಿವೃದ್ಧಿ ಮಂತ್ರಾಲಯ ಸರ್ವೆ ನಡೆಸಿದೆ.
ದೇಶದ ಎಲ್ಲ ರಾಜ್ಯಗಳ ಪಂಚಾಯತ್‌ಗಳನ್ನು ಗುರುತಿಸಿದೆ. ಅದರಂತೆ ಕರ್ನಾಟಕದ ಮೂರು ಗ್ರಾಪಂಗಳಾದ ಕೊಡಗು ಜಿಲ್ಲೆಯ ಹೊದ್ದೂರು, ದಕ್ಷಿಣ ಕನ್ನಡ ಜಿಲ್ಲೆಯ ಬಾಲೆಪುಣಿ ಹಾಗೂ ಕೊಪ್ಪಳ ಜಿಲ್ಲೆಯ ಮುನಿರಾಬಾದ್ ಗ್ರಾಮ ಪಂಚಾಯತ್‌ಗಳು ಪ್ರಶಂಸೆಗೆ ವ್ಯಕ್ತವಾಗಿವೆ.
ಕೇಂದ್ರ ಸರ್ಕಾರ ಈ ರೀತಿ ಸರ್ವೇ ಮಾಡುತ್ತದೆ ಎಂದು ಗೊತ್ತಿರಲಿಲ್ಲ. ಆದರೆ, ಕೊರೊನಾ ನಿಯಂತ್ರಣ ಮಾಡುವುದು ಆಗ ನಮಗೆ ಮುಖ್ಯವಾಗಿತ್ತು. ಎಲ್ಲರ ಸಹಕಾರದಿಂದ ಗ್ರಾಮದಲ್ಲಿ ಕೊರೊನಾ ನಿಯಂತ್ರಣ ಮಾಡಿದ್ದೇವೆ. ಕೇಂದ್ರ ಸರ್ಕಾರ ನಮ್ಮ ಪಂಚಾಯತ್‌ನ ಗುರುತಿಸಿ ಪ್ರಶಂಸಿರೋದು ನಿಜಕ್ಕೂ ಖುಷಿಯಾಗುತ್ತಿದೆ ಅಂತಾರೆ ಮುನಿರಾಬಾದ್ ಗ್ರಾಮ ಪಂಚಾಯತ್ ಪಿಡಿಒ ಜಯಲಕ್ಷ್ಮಿ.