ಕುಷ್ಟಗಿ (ಕೊಪ್ಪಳ): ನದಿ, ನಾಲೆಗಳ ಮೂಲಕ ಕೆರೆಗಳಲ್ಲಿ ನೀರು ನಿಲ್ಲಿಸಿ, ಅಂತರ್ಜಲ ವೃದ್ಧಿಸುವುದರಿಂದ ಹಳ್ಳಿ ಜೀವನ ಸುಸ್ಥಿರವಾಗಲಿದೆ. ನೆಮ್ಮದಿ ಜೀವನ ಹಾಗೂ ಸ್ವಾಭಿಮಾನದಿಂದ ಬದುಕಲು ಹಾಗೂ ಗುಳೆ ಹೋಗುವುದನ್ನು ತಪ್ಪಿಸಲು ಸಾಧ್ಯವಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದರು.
ತಾಲೂಕಿನ ಕಡೇಕೊಪ್ಪ ಕ್ರಾಸ್ನಲ್ಲಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ಅಂದಾಜು 500 ಕೋಟಿ ರೂ. ಯೋಜನಾ ವೆಚ್ಚದಲ್ಲಿ ಕೃಷ್ಣ ನದಿಯಿಂದ ನೀರಾವರಿ ಯೋಜನೆಯ ಮೂಲಕ ಕೆರೆಗಳಿಗೆ ನೀರನ್ನು ತುಂಬಿಸುವ ಕಾಮಗಾರಿಯ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಹಳ್ಳಿ ಜನರು ನೆಮ್ಮದಿಯಿಂದ, ಸ್ವಾಭಿಮಾನದಿಂದ ಊರಲ್ಲಿದ್ದು, ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಪೂರಕ ವಾತವರಣ ಸೃಷ್ಟಿಸಿದರೆ ರಾಜ್ಯದ ಅನೇಕ ಸಂಕಷ್ಟಗಳಿಗೆ ಪರಿಹಾರ ಸಿಗುತ್ತದೆ. ಕೆರೆಗಳಿಗೆ ನದಿ ಮೂಲಕ ನೀರು ಕೊಡುವುದರಿಂದ ಪ್ರತಿ ವರ್ಷವೂ ಬೆಳೆಗಳಿಗೆ ನೀರು ಕೊಡಲು ಸಾಧ್ಯ ಎಂದರು.
ಭೂಮಿ ಪೂಜೆ ನೆರವೇರಿಸಿದ ಸಚಿವ ಜೆಸಿ ಮಾಧುಸ್ವಾಮಿ ಕುಡಿಯುವ ನೀರು, ಬರ ಎಂದು ಅದೆಷ್ಟೋ ಖರ್ಚು ಮಾಡುವ ಹಣವನ್ನು ಕೆರೆಗಳನ್ನು ತುಂಬಿಸಿ, ಅಂತರ್ಜಲ ವೃದ್ಧಿಸಿದರೆ ಒಂದಿಷ್ಟು ಭಾಗಕ್ಕೆ ಶಾಶ್ವತ ಪರಿಹಾರ ಸಿಗಲು ಸಾಧ್ಯವಿದೆ. ಈ ಆಶಯದ ಮೇರೆಗೆ ಸಿಎಂ ಯಡಿಯೂರಪ್ಪನವರು ಹನಿ ನೀರಾವರಿ ಯೋಜನೆಗೆ 5 ಸಾವಿರ ಕೋಟಿ ರೂ. ಮೀಸಲಿರಿಸಿದ್ದಾರೆ. ಅವರೇ ಹೇಳಿದ ಹಾಗೆ ಏತ ನೀರಾವರಿ ಯೋಜನೆಗಳಿಗೆ ಆದ್ಯತೆ ನೀಡುವ ಬದಲಿಗೆ ನಾಲೆ, ಜಲಾಶಯಗಳಿಂದ ಕೆರೆಗಳಿಗೆ ನೀರು ತಲುಪಿಸಿದರೆ ಸಂಕಷ್ಟದ ಪರಿಸ್ಥಿತಿಯಿಂದ ಪಾರಾಗುವ ಸಾಧ್ಯತೆಗಳಿವೆ ಎಂದರು.