ಕೊಪ್ಪಳ:ಉದ್ಯೋಗ ಖಾತ್ರಿ ಯೋಜನೆಯಲ್ಲಿ ನಿರ್ಮಿಸಿಕೊಂಡ ಕೃಷಿ ಹೊಂಡದ ಹಣ ಪಾವತಿಸಿದ್ದರೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ. ಅದಕ್ಕೆ ನೀವೇ ಕಾರಣ ಎಂದು ಫಲಾನುಭವಿಯೊಬ್ಬರು ಗ್ರಾಮ ಪಂಚಾಯತ್ಗೆ ಬರೆದ ಪತ್ರಕ್ಕೆ ಪಂಚಾಯತ್ ಅಭಿವೃದ್ದಿ ಅಧಿಕಾರಿಯು ಸ್ವೀಕೃತಿ ಪತ್ರ ನೀಡಿರುವ ಘಟನೆ ಬೆಳಕಿಗೆ ಬಂದಿದೆ.
ಪಿಡಿಒ ವರ್ತನೆಗೆ ಜನತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೊಪ್ಪಳ ಜಿಲ್ಲೆಯ ಕುಕನೂರಿನ ತಾಲೂಕಿನ ಮಂಗಳೂರು ಗ್ರಾಮ ಪಂಚಾಯ್ತಿಯ ವ್ಯಾಪ್ತಿಯ ಮಂಗಳೂರು ಗ್ರಾಮದ ಮಂಜುನಾಥ ಕಂಬಾರ ಎಂಬುವವರು ಕಳೆದ ವರ್ಷ ನರೇಗಾ ಯೋಜನೆಯಲ್ಲಿ ಸುಮಾರು 60 ಸಾವಿರ ರೂಪಾಯಿ ಖರ್ಚು ಮಾಡಿ ಕೃಷಿ ಹೊಂಡ ನಿರ್ಮಿಸಿಕೊಂಡಿದ್ದಾರೆ.
ಕೃಷಿ ಹೊಂಡ ನಿರ್ಮಾಣಕ್ಕಾಗಿ ಅವರು ತಮ್ಮ ಪತ್ನಿ ಆಭರಣಗಳನ್ನು ಸಹ ಒತ್ತೆಯಿಟ್ಟಿದ್ದಾರೆ. ಕೃಷಿ ಹೊಂಡದ ಹಣವನ್ನು ಪಂಚಾಯತ್ ನೀಡಿದರೆ ಒತ್ತೆ ಇಟ್ಟಿರುವ ಆಭರಣ ಬಿಡಿಸಿಕೊಳ್ಳಬಹುದು ಎಂದುಕೊಂಡು ಅವರು ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.