ಗಂಗಾವತಿ(ಕೊಪ್ಪಳ):ಕೃಷಿ ಚಟುವಟಿಕೆಯಲ್ಲಿ ನಿರತನಾಗಿದ್ದ ಯುವಕನೊಬ್ಬನಿಗೆ ವಿಚಿತ್ರ ಕೀಟವೊಂದು ಕಚ್ಚಿದ ಪರಿಣಾಮ ತೀವ್ರ ಅಸ್ವಸ್ಥಗೊಂಡು ಸಾವು-ಬದುಕಿನೊಡನೆ ಹೋರಾಡಿ ಚೇತರಿಸಿಕೊಂಡ ಘಟನೆ ತಾಲೂಕಿನ ಮಕ್ಕುಂಪಿಯಲ್ಲಿ ನಡೆದಿದೆ. ಗ್ರಾಮದ ಲಿಂಗನಗೌಡ ಹನುಮನಗೌಡ ಎಂಬ ರೈತರೊಬ್ಬರ ಹೊಲದಲ್ಲಿ ಬೆಳೆದಿದ್ದ ಮೆಕ್ಕೆಜೋಳವನ್ನು ಅದೇ ಗ್ರಾಮದ ಶಂಕರಗೌಡ ಎಂಬ ಯುವಕ ಕತ್ತರಿಸಲು ಹೋದಾಗ ಈ ವಿಚಿತ್ರ ಕೀಟ ಕಂಡು ಬಂದಿದೆ.
ಸಾಮಾನ್ಯವಾಗಿ ಕೀಟಗಳು ಏನು ಮಾಡುವುದಿಲ್ಲವೆಂದು ಯುವಕ ಜೋಳದ ತೆನೆ ಕತ್ತರಿಸಲು ಮುಂದಾದಾಗ ಕೀಟ ಕಚ್ಚಿದೆ. ಇದರಿಂದ ವಿಪರೀತ ನೋವಿನಿಂದ ನರಳಿದ ಯುವಕನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಯುವಕನ ಆರೋಗ್ಯ ವಿಷಮ ಸ್ಥಿತಿಗೆ ತಲುಪಿದೆ. ಕೂಡಲೇ ಸ್ಥಳೀಯರು ಆತನನ್ನು ಗಂಗಾವತಿಯ ಉಪವಿಭಾಗ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.
ಸ್ಪೈನಿ ಓಕ್ ಸ್ಲಗ್ ಎಂಬ ಹುಳು ಮೂರು ದಿನಗಳ ಬಳಿಕ ಯವಕ ಚೇತರಿಸಿಕೊಂಡಿದ್ದಾನೆ. ಯುವಕನ ಕಣ್ಣುಗಳು ಕೆಂಪಾಗಿ, ಮೂರ್ಛೆ ಹೋಗಿದ್ದು, ಮೈಮೇಲೆ ಬೊಬ್ಬೆಗಳು ಮೂಡಿತ್ತು ಎಂದು ಯುವಕನ ಸಂಬಂಧಿ ಸಿದ್ಧನಗೌಡ ತಿಳಿಸಿದರು.
ಸ್ಪೈನಿ ಓಕ್ ಸ್ಲಗ್ ಎಂಬ ಹುಳು: ತಾಲೂಕಿನ ನಾನಾ ಭಾಗದ ಮೆಕ್ಕೆಜೋಳದ ಬೆಳೆಯ ಮಧ್ಯೆ ಕಾಣಿಸಿಕೊಳ್ಳುತ್ತಿರುವುದು ಸ್ಪೈನಿ ಓಕ್ ಸ್ಲಗ್ ಎಂಬ ಹುಳುವಾಗಿದೆ. ಇದರ ವೈಜ್ಞಾನಿಕ ಹೆಸರು ಯುಕ್ಲಿಯ ಡೆಲ್ಫಿನಿ ಎಂದು ಕೀಟ ತಜ್ಞ ರಾಘವೇಂದ್ರ ಎಲಿಗಾರ ತಿಳಿಸಿದ್ದಾರೆ.
ಮನುಷ್ಯ ಇದನ್ನು ಮುಟ್ಟಿದರೆ ಇತರೆ ಕೋರಿಹುಳು ಮುಟ್ಟಿದಾಗ ಆಗುವ ಉರಿ, ತುರಿಕೆಗಳು ಉಂಟಾಗುತ್ತದೆ. ಅಲರ್ಜಿ ಇರುವಂತಹ ಮನುಷ್ಯರು ಮುಟ್ಟಿದಾಗ ಮಾತ್ರ ಅವರಲ್ಲಿ ತೀವ್ರತರನಾದ ಲಕ್ಷಣಗಳು ಕಾಣಬಹುದು. ಅಂತವರು ಮಾತ್ರ ಆಸ್ಪತ್ರೆಯಲ್ಲಿ ವೈದ್ಯರಿಂದ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕಿದೆ.
ಆದರೆ ಇದು ಮಾರಣಾಂತಿಕವಾಗಿ ಮನುಷ್ಯರಲ್ಲಿ ವಿಷಕಾರಿಯಾಗಿರುವ ಬಗ್ಗೆ ಯಾವುದೇ ವೈಜ್ಞಾನಿಕ ಪುರಾವೆಗಳು ಇಲ್ಲ. ನೈಸರ್ಗಿಕವಾಗಿ ಪಕ್ಷಿಗಳಿಂದ ಮತ್ತು ಇತರೆ ಪರಭಕ್ಷಕ ಕೀಟಗಳಿಂದ ತನ್ನನ್ನು ತಾನು ರಕ್ಷಿಸಿಕೊಳ್ಳಲು ಈ ಹುಳುವಿಗೆ ನಿಸರ್ಗ ಕೊಟ್ಟಿರುವ ವರವಿದು. ಇದನ್ನು ಕ್ಯಾಮೋಫ್ಲೆಜ್ ತಂತ್ರ ಎಂದು ಕರೆಯುತ್ತಾರೆ. ಪಕ್ಷಿಗಳು ಇದು ಎಲೆಯ ರೂಪದಲ್ಲಿ ಇರುವುದರಿಂದ ಎಲೆ ಎಂದು ಭಾವಿಸಿ ತಿನ್ನಲು ಬರುವುದಿಲ್ಲ ಎನ್ನುತ್ತಾರೆ ರಾಘವೇಂದ್ರ ಎಲಿಗಾರ.
ಕೀಟ ತಜ್ಞ ರಾಘವೇಂದ್ರ ಎಲಿಗಾರ ಮುಳ್ಳುಗಳೊಂದಿಗೆ ಭಯಾನಕವಾಗಿ ಕಾಣುವುದರಿಂದ ಪರಭಕ್ಷಕ ಕೀಟಗಳು ಇದನ್ನು ತಿನ್ನಲು ಬರುವುದಿಲ್ಲ. ಹೀಗೆ ಇದು ತನ್ನನ್ನು ತಾನು ರಕ್ಷಿಸಿಕೊಳ್ಳುತ್ತದೆ. ಕೋರಿಹುಳುವಿನಂತೆ ಇದು ಸಾಮಾನ್ಯವಾಗಿ ಜೂನ್-ಅಕ್ಟೋಬರ್ನಲ್ಲಿ ಅಲ್ಲಲ್ಲಿ ಒಂಟಿಯಾಗಿ ಕಾಣಿಸಿಕೊಳ್ಳುತ್ತದೆ.
ಹುಳುವಿನ ಬಣ್ಣ ತಾನಿರುವ ವಾತಾವರಣಕ್ಕೆ ಅನುಗುಣವಾಗಿ ಬದಲಿಸಿಕೊಳ್ಳುತ್ತದೆ. ಸಾಮಾನ್ಯವಾಗಿ ಇದು 10ಮಿ.ಮಿ.ನಿಂದ 25ಮಿ.ಮಿ. ಉದ್ದವಿರುತ್ತದೆ. ಇದು ಬಹುಬಕ್ಷಕ ಕೀಟವಾಗಿದ್ದು, ನಾನಾ ರೀತಿಯ ಸಸ್ಯ, ಎಲೆ ತಿಂದು ಬದುಕುತ್ತದೆ ಎಂದು ಕೀಟತಜ್ಞ ರಾಘವೇಂದ್ರ ಎಲಿಗಾರ ತಿಳಿಸಿದ್ದಾರೆ.
ಇದನ್ನೂ ಓದಿ :ಮೋದಿ ಕ್ಯಾಂಟಿನ್: ಇಪ್ಪತ್ತು ರೂ ಗೆ ಊಟ ಹತ್ತು ರೂಪಾಯಿಗೆ ತಿಂಡಿ