ಗಂಗಾವತಿ (ಕೊಪ್ಪಳ):ಸಂವಿಧಾನದ ಉಳಿವಿಗೆ ಹಾಗೂ ಪ್ರಜಾಪ್ರಭುತ್ವದ ಅಸ್ತಿತ್ವಕ್ಕಾಗಿ ನಿತ್ಯ ಹೋರಾಟ ಮಾಡುವ ಸಂಘಟಕರು, ಬರಹಗಾರರು, ಲೇಖಕರು ಹಾಗೂ ಪತ್ರಕರ್ತರು ಜೈಲಿಗೆ ಹೋಗಲು ಹೆದರಬಾರದು ಎಂದು ಬಂಡಾಯ ಸಾಹಿತಿ, ಕಾದಂಬರಿಕಾರ ಕುಂ. ವೀರಭದ್ರಪ್ಪ ಹೇಳಿದ್ದಾರೆ. ನಗರದ ನೀಲಕಂಠೇಶ್ವರ ವೃತ್ತದಲ್ಲಿನ ಖಾಸಗಿ ಹೋಟೆಲ್ನಲ್ಲಿ ಆಯೋಜಿಸಿದ್ದ ಹಿರಿಯ ಕಾರ್ಮಿಕರ ಹೋರಾಟಗಾರ ಜೆ.ಭಾರದ್ವಾಜ್ ಅವರ ಅಭಿನಂದನಾ ಗ್ರಂಥಗಳಾದ`ದೇಶಮಂಟೆ ಮನುಷುಲು (ದೇಶವೆಂದರೆ ಮನಯಷ್ಯರು) ಮತ್ತು ಲಾಲ್ ಸಲಾಂ ಕಾಮ್ರೆಡ್ ಎಂಬ ಕೃತಿಗಳ ಲೋಕಾರ್ಪಣೆ ಮಾಡಿ ಮಾತನಾಡಿದರು.
ದೇಶಭಕ್ತರು ಸರ್ವ ತ್ಯಾಗ ಮಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟರು.. ಇದಕ್ಕೂ ಮೊದಲು ಕಾರ್ಯಕ್ರಮವನ್ನು ತಂಬೂರಿ ಮೀಟುವ ಮೂಲಕ ಚಾಲನೆ ನೀಡಿದ ವೀರಭದ್ರಪ್ಪ, ಬ್ರಿಟಿಷರ ಆಳ್ವಿಕೆ ಗುಲಾಮಗಿರಿಯಿಂದ ಹೊರ ಬರಲು ಲಕ್ಷಾಂತರ ದೇಶಭಕ್ತರು ಸರ್ವವನ್ನು ತ್ಯಾಗ ಮಾಡಿ ಸ್ವಾತಂತ್ರ್ಯ ಗಳಿಸಿ ಕೊಟ್ಟಿದ್ದಾರೆ. ಆದರೆ ಆ ಮಹಾನ್ ತ್ಯಾಗಿಗಳು ಗಳಿಸಿದ ಸ್ವಾತಂತ್ರ್ಯ ಇಂದು ಹರಣವಾಗುತ್ತಿದೆ. ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಉಳಿಸಲು ಸಂಘಟಕರು, ಬರಹಗಾರರು ಮತ್ತು ಲೇಖಕರು ಒಗ್ಗಟ್ಟು ಪ್ರದರ್ಶಿಸಬೇಕು. ಸಂವಿಧಾನ ನಮಗೆ ಹೋರಾಟ, ಧರ್ಮದ ಆಚರಣೆ, ಪ್ರತಿಭಟಿಸುವ ಮತ್ತು ವಾಕ್ ಸ್ವಾತಂತ್ರ್ಯದ ಹಕ್ಕು ನೀಡಿದೆ ಎಂದು ಹೇಳಿದರು.
ಪ್ರಜಾಪ್ರಭುತ್ವ ವಿರೋಧಿ ಕೃತ್ಯಗಳು ನಡೆಯುತ್ತಿದ್ದರೂ ಜನರು ಮೌನ ವಹಿಸಿದ್ದು ಸರಿಯಲ್ಲ:ನಮ್ಮನ್ನಾಳುವ ಸರ್ಕಾರ ಹೋರಾಟಗಾರರು, ಪತ್ರಕರ್ತರು, ಲೇಖಕರು, ಬರಹಗಾರರ ಮೇಲೆ ಪೊಲೀಸರನ್ನು ಗುಪ್ತವಾಗಿ ಬಿಟ್ಟು ಮಾಹಿತಿ ಸಂಗ್ರಹಿಸುವ ಕಾರ್ಯ ನಿತ್ಯವೂ ಮಾಡುತ್ತಿದೆ. ಯಾರು ಪೊಲೀಸ್ ಕಣ್ಗಾವಲಿನಲ್ಲಿರುತ್ತಾರೋ ಅವರೇ ನಿಜವಾದ ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಉಳಿಸುವವರಾಗಿದ್ದಾರೆ. ದೇಶದಲ್ಲಿ ಪ್ರಜಾಪ್ರಭುತ್ವ ವಿರೋಧಿ ಕೃತ್ಯಗಳು ನಡೆಯುತ್ತಿದ್ದರೂ ಜನರು ಮೌನವಹಿಸಿದ್ದು ಸರಿಯಲ್ಲ. ಜನರಲ್ಲಿ ಹೋರಾಟದ ಕಿಚ್ಚು ನಿಧಾನವಾಗಿ ಕಡಿಮೆಯಾಗುತ್ತಿರುವುದು ಪ್ರಜಾಪ್ರಭುತ್ವ ಮತ್ತು ಸಂವಿಧಾನಕ್ಕೆ ಮಾರಕವಾಗಿ ಪರಿಣಮಿಸಲಿದೆ ಎಂದು ಕುಂ ವೀರಭದ್ರಪ್ಪ ಕಳವಳ ವ್ಯಕ್ತಪಡಿಸಿದರು.