ಕುಷ್ಟಗಿ(ಕೊಪ್ಪಳ):ಪ್ರಭಾವಿ ರಾಜಕಾರಣಿ ಬಿ. ಶ್ರೀರಾಮುಲು ಅವರು ಯಡಿಯೂರಪ್ಪ ಅವರನ್ನು ಪ್ರಶ್ನಿಸುವುದನ್ನೇ ಮರೆತಿದ್ದಾರೆ ಎಂದಿದ್ದಾರೆ ವಾಟಾಳ್ ನಾಗರಾಜ್.
ಈಶಾನ್ಯ ಶಿಕ್ಷಕರ ಚುನಾವಣೆ ಹಿನ್ನೆಲೆಯಲ್ಲಿ ಪ್ರಚಾರಾರ್ಥವಾಗಿ ಆಗಮಿಸಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಶ್ರೀರಾಮುಲು ಅವರು ನಿರ್ವಹಿಸುತ್ತಿದ್ದ ಆರೋಗ್ಯ ಖಾತೆ ಬದಲಿಸಿ, ಸಮಾಜ ಕಲ್ಯಾಣ ಖಾತೆಗೆ ಬದಲಿಸಿರುವುದು ನಾಯಿ ಹಸಿದಿತ್ತು, ಹಿಟ್ಟು ಹಳಸಿತ್ತು ಎಂಬ ಗಾದೆಯಂತಾಗಿದೆ ಎಂದು ಈಶಾನ್ಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ವಾಟಾಳ್ ನಾಗರಾಜ್ ಸಚಿವ ಬಿ. ಶ್ರೀರಾಮುಲು ವಿಚಾರವಾಗಿ ವ್ಯಂಗ್ಯವಾಡಿದ್ರು.
ಗೆದ್ದರೆ ಕಲ್ಯಾಣ ಕರ್ನಾಟಕದ ಶಕ್ತಿ:
ಈ ಕ್ಷೇತ್ರದ 6 ಜಿಲ್ಲೆಗಳಲ್ಲಿ ಪ್ರತಿ ತಿಂಗಳು ಓಡಾಡಿಕೊಂಡು ಅನುಕೂಲಗಳನ್ನು ಕಲ್ಪಿಸುವುದಾಗಿ ವಾಟಾಳ್ ಭರವಸೆ ನೀಡಿದರು. ಈ ಭಾಗಕ್ಕಾಗಿ ಸರ್ಕಾರದಲ್ಲಿ ತೀವ್ರವಾಗಿ ಹೋರಾಟ ಮಾಡಬಲ್ಲ ಬಲವಾದ ವಿಶ್ವಾಸವಿದೆ. ಹೀಗಾಗಿ ಈ ಭಾಗದ ಶಿಕ್ಷಕರು, ಉಪಾಧ್ಯಾಯರು ಅತ್ಯಂತ ಪ್ರೀತಿ ವಿಶ್ವಾಸದಿಂದ ಮತ ನೀಡುವ ವಿಶ್ವಾಸ ವ್ಯಕ್ತಪಡಿಸಿದರು. ಇಲ್ಲಿ ಗೆದ್ದರೆ ಶಿಕ್ಷಕರಿಗೆ, ಕಲ್ಯಾಣ ಕರ್ನಾಟಕಕ್ಕೆ ಶಕ್ತಿ ಬರಲಿದೆ ಎಂದರು.
'ಯಡಿಯೂರಪ್ಪ ಸಂವಿಧಾನ ಗಾಳಿಗೆ ತೂರಿದ್ದಾರೆ'
ಯಡಿಯೂರಪ್ಪ ಸರ್ವಾಧಿಕಾರಿ, ಯಾರನ್ನು ಬೇಕಾದರೂ ಬದಲಿಸಬಹುದು, ತಮಗೆ ಬೇಕಾದವರನ್ನು ನಿಯೋಜಿಸಬಹುದು. ಇದು ಯಡಿಯೂರಪ್ಪ ಸರ್ಕಾರ ಅಲ್ಲ, ಇದೊಂದು ರೀತಿಯ ಯಡಿಯೂರಪ್ಪ ಅರಮನೆಯಾಗಿದ್ದು, ಅವರು ರಾಜನಂತೆ ಪ್ರಜಾಪ್ರಭುತ್ವ ಸಂವಿಧಾನವನ್ನು ಗಾಳಿಗೆ ತೂರಿದ್ದಾರೆ. ಅಧಿವೇಶನವೂ ಅವರಿಷ್ಟದಂತೆ ನಡೆಯುತ್ತದೆ ಎಂದು ಟೀಕಿಸಿದ್ದಾರೆ.
ವಿಧಾನಸೌಧದಲ್ಲಿ ಸರ್ಕಾರದ ಕೆಲಸ ದೇವರ ಕೆಲಸ ಅಂತ ಬರೆದಿದ್ದು, ಈ ಯಡಿಯೂರಪ್ಪ ಸರ್ಕಾರದ ಕೆಲಸ ಭ್ರಷ್ಟರ ಕೆಲಸವಾಗಿದೆ. ಯಡಿಯೂರಪ್ಪ ಒಬ್ಬರೇ ಚಕ್ರಾಧಿಪತ್ಯದಲ್ಲಿದ್ದಾರೆ. ಈ ಸರ್ಕಾರದ ಆಡಳಿತ ನಡೆಸುತ್ತಿಲ್ಲ, ಬರೀ ಮ್ಯಾಜಿಕ್ ಮಾಡುತ್ತಿದ್ದು ಯಡಿಯೂರಪ್ಪ ಮೆಜೀಶಿಯನ್ ಆಗಿದ್ದಾರೆಂದು ವಾಟಾಳ್ ಕುಟುಕಿದರು.