ಗಂಗಾವತಿ:ತಾಲ್ಲೂಕಿನ ಸಣಾಪುರ ಕೆರೆಯಲ್ಲಿ ಡೆತ್ಸ್ಪಾಟ್ ಎಂದೇ ಕುಖ್ಯಾತಿ ಪಡೆದಿದ್ದು, ಈ ಕೆರೆಯಲ್ಲಿ ಯಾವುದೇ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೇ ಪ್ರವಾಸಿಗರ ದೋಣಿ ವಿಹಾರ ನಡೆಸಲಾಗುತ್ತಿರುವುದು ಕಂಡು ಬಂದಿದೆ.
ತಾಲ್ಲೂಕಿನರುವ ಪ್ರಕೃತಿದತ್ತ ಬೆಟ್ಟಗುಡ್ಡಗಳ ತಾಣ, ಪ್ರಮುಖ ಧಾರ್ಮಿಕ ಕೇಂದ್ರ ಮತ್ತು ಪರಿಸರದ ಪ್ರದೇಶಗಳನ್ನು ಪ್ರವಾಸಿ ತಾಣವಾಗಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಾಳ್ಕರ್ ವಿಶೇಷ ಆಸಕ್ತಿ ವಹಿಸಿ ಪ್ರವಾಸೋದ್ಯಮಕ್ಕೆ ಪ್ರೇರಣೆ ನೀಡುತ್ತಿದ್ದಾರೆ.
ಇದನ್ನೇ ಬಂಡವಾಳ ಮಾಡಿಕೊಂಡ ಕೆಲವರು ತಾಲ್ಲೂಕಿನ ಸಣಾಪುರ ಗ್ರಾಮದ ಬಳಿ ಇರುವ ಡೆತ್ ಸ್ಫಾಟ್ ಎಂದೇ ಗುರುತಿಸಿಕೊಂಡಿರುವ ಕೆರೆಯಲ್ಲಿ ಅವೈಜ್ಞಾನಿಕವಾಗಿ ಪ್ರವಾಸಿಗರನ್ನು ದೋಣಿಗಳಲ್ಲಿ ಕರೆದೊಯ್ಯುವ ಮೂಲಕ ಜನರ ಜೀವದ ಜೊತೆ ಚೆಲ್ಲಾಟವಾಡುತ್ತಿರುವುದು ಬೆಳಕಿಗೆ ಬಂದಿದೆ.
ಹೆಚ್ಚು ಸುರಕ್ಷಿತವಲ್ಲದ ನಾಡದೋಣಿಗಳನ್ನು ಬಳಸಿಕೊಂಡು ಪ್ರವಾಸಿಗರನ್ನು ಜಲಾಶಯ, ಕೆರೆಯಲ್ಲಿ ವಿಹಾರಕ್ಕೆ ಕರೆದೊಯ್ಯಬಾರದು ಎಂದು ಜಿಲ್ಲಾಡಳಿತ ನಿಯಮ ವಿಧಿಸಿದೆ. ಆದರೆ, ಕೆಲ ಮೀನುಗಾರರು, ಜಿಲ್ಲಾಡಳಿತದ ನಿಯಮ ಗಾಳಿಗೆ ತೂರಿ ಜಲಾಶಯದಲ್ಲಿ ಅನಧಿಕೃತವಾಗಿ ನಾಡದೋಣಿಗಳ ಬೋಟಿಂಗ್ ನಡೆಸುತ್ತಿದ್ದಾರೆ.
ಕೊಪ್ಪಳದ 'ಡೆತ್ಸ್ಪಾಟ್' ಸಣಾಪುರ ಕೆರೆಯಲ್ಲಿ ಅಸುರಕ್ಷಿತ ದೋಣಿ ವಿಹಾರ ಗುಣಮಟ್ಟದ ಜೀವರಕ್ಷಕ ಜಾಕೆಟ್ ಬದಲಿಗೆ ಕಳಪೆ ಗುಣಮಟ್ಟದ ಜಾಕೆಟ್ಗಳನ್ನು ಪ್ರವಾಸಿಗರಿಗೆ ನೀಡಿ ನಾಡದೋಣಿಗಳಲ್ಲಿ ಸಂಚಾರಕ್ಕೆ ತಲಾ 100 ರಿಂದ 150 ರೂಪಾಯಿ ಮೊತ್ತದ ಹಣ ವಸೂಲಿ ಮಾಡಲಾಗುತ್ತಿದೆ. ಗ್ರಾಮ ಪಂಚಾಯಿತಿಯಿಂದ ಕನಿಷ್ಠ ಅನುಮತಿಯೂ ಪಡೆದಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಅಕ್ರಮಕ್ಕೆ ಕಡಿವಾಣ: ಡಿಸಿ ವಿಕಾಸ್
ತಾಲ್ಲೂಕಿನ ಸಣಾಪುರ ಜಲಾಶಯದಲ್ಲಿ ಅನಧಿಕೃತವಾಗಿ ನಾಡದೋಣಿ ಬಳಸಿ ಪ್ರವಾಸಿಗರನ್ನು ಕೆರೆಯಲ್ಲಿ ಕರೆದೊಯ್ಯುತ್ತಿರುವುದು ಗಮನಕ್ಕೆ ಬಂದಿದ್ದು, ಅಕ್ರಮಕ್ಕೆ ಕಡಿವಾಣ ಹಾಕಲಾಗುವುದು ಎಂದು ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಾಳ್ಕರ್ ತಿಳಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಆನೆಗೊಂದಿ ಪರಿಸರದಲ್ಲಿ ಪ್ರವಾಸೋದ್ಯಮ ಉತ್ತೇಜಿಸುವ ಉದ್ದೇಶಕ್ಕೆ ಹಲವು ಯೋಜನೆ ರೂಪಿಸಲಾಗುತ್ತಿದೆ. ರಾಕ್ ಕ್ಲಿಂಬಿಂಗ್, ಹಾರ್ಸ್ ರೈಡಿಂಗ್, ರೀವರ್ ರಾಫ್ಟಿಂಗ್ನಂತಹ ಸಾಹಸ ಕ್ರೀಡೆಗಳನ್ನು ಬಗ್ಗೆ ಯುವಕರಿಗೆ ತರಬೇತಿ ಕೊಡಿಸಿ, ಬಳಿಕ ಪ್ರವಾಸಿಗರಿಗೆ ಸೇವೆ ಕೊಡಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಇದನ್ನೂ ಓದಿ:ಕುಂದಾಪುರ ಕೊರಗ ಸಮುದಾಯದ ಮೇಲಿನ ಪೊಲೀಸ್ ಪ್ರಕರಣ ಯೋಜಿತ ಸಂಚು: ಸಿದ್ದರಾಮಯ್ಯ