ಗಂಗಾವತಿ: ವಿಜಯನಗರ ಸಾಮ್ರಾಜ್ಯ ಕಾಲಘಟ್ಟದ್ದು ಎಂದು ಹೇಳಲಾಗಿರುವ ಅಪ್ರಕಟಿತ ಶಿಲಾ ಶಾಸನ ಮತ್ತು ಭಗ್ನ ರೂಪದ ಶಿಲಾ ಮೂರ್ತಿಯೊಂದು ಇಲ್ಲಿನ ತಾರಾ ಪರ್ವತದಲ್ಲಿ ಸಿಕ್ಕಿದೆ. ಹವ್ಯಾಸಿ ಪರ್ವತರೋಹಿಗಳ ತಂಡ ಈ ಶಾಸನವನ್ನು ಪತ್ತೆ ಹಚ್ಚಿದೆ. ವಿಜಯನಗರದ ಅರಸರ ಕಾಲದಲ್ಲಿ ಬಳಕೆಯಲ್ಲಿದ್ದ ತೆಲುಗು ಮಿಶ್ರಿತ ಕನ್ನಡ ಅಥವಾ ಹಳೆಗನ್ನಡದಲ್ಲಿನ ಬರಹ ಶಿಲೆಯ ಮೇಲಿದೆ. ಈ ಬರಹದ ಸಂದೇಶ ಏನು ಎಂಬುದು ಗೊತ್ತಾಗಿಲ್ಲ. ಆದರೆ, ದೊಡ್ಡ ಬಂಡೆಯ ಮೇಲೆ ಬರೆದ ಶಿಲಾ ಶಾಸನ ಕಾಲಾ ನಂತರದಲ್ಲಿ ನೆಲಕ್ಕೆ ಬಿದ್ದು ಹುದುಗಿ ಹೋಗುತ್ತಿರುವ ಹಂತದಲ್ಲಿ ಪತ್ತೆಯಾಗಿದೆ.
ಗಂಗಾವತಿ - ಆನೆಗೊಂದಿ ರಸ್ತೆಯಲ್ಲಿ ಬರುವ ಕಡೇಬಾಗಿಲು ಗ್ರಾಮದ ಎಡ ಭಾಗದಲ್ಲಿನ ಬೃಹತ್ ಬೆಟ್ಟವನ್ನು ತಾರಾ ಪರ್ವತ ಅಥವಾ ತಾರಾ ಬೆಟ್ಟವೆಂದು ಜನ ಗುರುತಿಸುತ್ತಾರೆ. ಇದು ವಿಜಯನಗರ ಸಾಮ್ರಾಜ್ಯದಲ್ಲಿ ದಕ್ಷಿಣ ದಿಕ್ಕಿನಲ್ಲಿದ್ದು, ಪ್ರಾಕೃತಿಕವಾದ ರಕ್ಷಣಾ ಗೋಡೆಯನ್ನಾಗಿ ಅರಸರು ಬಳಕೆ ಮಾಡಿಕೊಳ್ಳುತ್ತಿದ್ದರು ಎನ್ನಲಾಗುತ್ತಿದೆ. ಅಷ್ಟೇ ಅಲ್ಲದೆ, ಆನೆಗೊಂದಿಗೆ ಸೇರಿದ ಈ ದಕ್ಷಿಣ ದಿಕ್ಕಿನ ಭಾಗವನ್ನು ಅರಸರು ಕೊನೆಯ ಭಾಗ ಎಂದು ಗುರುತಿಸಿದ್ದರಿಂದ ಗ್ರಾಮಕ್ಕೆ ಕಡೆಬಾಗಿಲು ಎಂಬ ಹೆಸರು ಬಂದಿದೆ ಎಂಬುದು ಪ್ರತೀತಿ.
ಇದನ್ನೂ ಓದಿ :ಮೈಸೂರು: 13ನೇ ಶತಮಾನದ ಹೊಯ್ಸಳರ ಕಾಲದ ವಿಶಿಷ್ಟ ವೀರಗಲ್ಲು ಶಾಸನ ಪತ್ತೆ
ವ್ಯಕ್ತಿಯೊಬ್ಬರು ರಾಜಾ ಗಾಂಭೀರ್ಯದಿಂದ ಕತ್ತಿಯನ್ನು ಮೇಲಕ್ಕೆ ಎತ್ತಿ ಹಿಡಿದು ದಿಟ್ಟಿಸಿ ನೋಡುತ್ತಾ ನಿಂತಿರುವ ಭಂಗಿಯಲ್ಲಿನ ಶಿಲೆ ಭಗ್ನ ಸ್ವರೂಪದಲ್ಲಿ ದೊರೆತಿದೆ. ಇದನ್ನು ವೀರಭದ್ರೇಶ್ವರ ಮೂರ್ತಿ ಎಂದು ಹೇಳಲಾಗುತ್ತಿದೆ. ಗ್ರಾಮ ಮತ್ತು ಜನವಸತಿಯಿಂದ ದೂರದಲ್ಲಿರುವ ಈ ಬೆಟ್ಟದಲ್ಲಿ ಪರ್ವತಾರೋಹಿಗಳು ಹವ್ಯಾಸಕ್ಕಾಗಿ ಬೆಟ್ಟ ಹತ್ತುತ್ತಾರೆ. ಉಳಿದಂತೆ ಕುರಿ ಮತ್ತು ದನಗಳನ್ನು ಮೇಯಿಸುವ ಉದ್ದೇಶಕ್ಕೆ ದನಗಾಹಿಗಳು ಮಾತ್ರ ಈ ಬೆಟ್ಟದಲ್ಲಿ ಓಡಾಡುತ್ತಾರೆ. ಹಾಗಾಗಿ, ಬಹುಶಃ ದನಗಾಹಿಗಳು ಮೂರ್ತಿಯನ್ನು ಧ್ವಂಸ ಮಾಡಿರುವ ಸಾಧ್ಯತೆ ಇದೆ.