ಕರ್ನಾಟಕ

karnataka

ETV Bharat / state

ಎರಡು ದಶಕ ಕಳೆದರೂ ಪೂರ್ಣಗೊಳ್ಳದ ಮುನಿರಾಬಾದ್-ಮೆಹಬೂಬನಗರ ರೈಲ್ವೆ ಯೋಜನೆ - ಕೊಪ್ಪಳ ಸಂಸದರಾಗಿದ್ದ ಬಸವರಾಜ ರಾಯರಡ್ಡಿ

ಕೊಪ್ಪಳ ತಾಲೂಕಿನ ಗಿಣಗೇರಿಯಿಂದ ಆರಂಭವಾಗಿ ಗಂಗಾವತಿ, ಕಾರಟಗಿ, ಸಿಂಧನೂರು, ಜವಳಗೇರಾ, ನೀರಮಾನ್ವಿ, ಮಮದಾಪುರ, ರಾಯಚೂರು ಮಾರ್ಗವಾಗಿ ಆಂಧ್ರದ ದೇವರಕದ್ರವರೆಗೆ ಕರ್ನಾಟಕ ವ್ಯಾಪ್ತಿಯ 185 ಕಿಲೋ ಮೀಟರ್ ವ್ಯಾಪ್ತಿಯನ್ನು ಈ ರೈಲು ಲೈನ್ ಹೊಂದಿದೆ. ಆರಂಭದಲ್ಲಿ ಸುಮಾರು 1350 ಕೋಟಿ ರುಪಾಯಿ ಅಂದಾಜು ವೆಚ್ಚದ ಈ ಕಾಮಗಾರಿ ಈಗ ಬರೋಬ್ಬರಿ 2,526 ಕೋಟಿ ರೂಪಾಯಿಗೆ ಏರಿದೆ.

unfinished-munirabad-mehboobanagar-railway-project
ಮುನಿರಾಬಾದ್-ಮೆಹಬೂಬನಗರ ರೈಲ್ವೇ ಯೋಜನೆ

By

Published : Jan 22, 2021, 8:59 PM IST

ಕೊಪ್ಪಳ: ಕಲ್ಯಾಣ ಕರ್ನಾಟಕ ಹಾಗೂ ಆಂಧ್ರ ಪ್ರದೇಶ ರಾಜ್ಯದ ನಡುವೆ ಸಂಪರ್ಕ ಕಲ್ಪಿಸುವ ಪ್ರಮುಖ ರೈಲ್ವೆ ಯೋಜನೆಗಳಲ್ಲಿ ಒಂದಾಗಿರುವ ಮುನಿರಾಬಾದ್-ಮೆಹಬೂಬನಗರ ರೈಲ್ವೆ ಯೋಜನೆ ಎರಡು ದಶಕ ಕಳೆದರೂ ಇನ್ನೂ ಪೂರ್ಣಗೊಂಡಿಲ್ಲ. ಮಹತ್ವದ ಯೋಜನೆಯೊಂದು ಇನ್ನೂ ಪೂರ್ಣಗೊಳ್ಳದೆ ಈ ಭಾಗದ ಜನರ ನಿರಾಸೆಗೆ ಕಾರಣವಾಗುತ್ತಿದೆ.

ಮುನಿರಾಬಾದ್-ಮೆಹಬೂಬನಗರ ರೈಲ್ವೆ ಯೋಜನೆ

ಓದಿ: ಆಹಾರ ಅರಸಿ ಬಂದ ಗಜರಾಜನಿಗೆ ಬೆಂಕಿ ಹಚ್ಚಿದ ಮನುಜ; ನೋವಿನ ಘೀಳು ಕಲ್ಲು ಹೃದಯವ ಕರಗಿಸದಿರದು!

ಮುನಿರಾಬಾದ್-ಮೆಹಬೂಬನಗರ ರೈಲ್ವೆ ಯೋಜನೆಗೆ 1996ರಲ್ಲಿ ಅಂದು ಕೊಪ್ಪಳ ಸಂಸದರಾಗಿದ್ದ ಬಸವರಾಜ ರಾಯರಡ್ಡಿ, ಅಂದಿನ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರನ್ನು ಕರೆತಂದು ಈ ಯೋಜನೆಗೆ ಅಡಿಗಲ್ಲು ಹಾಕಿಸಿದ್ದರು. ಮೆಹಬೂಬನಗರದಿಂದ ಕರ್ನಾಟಕದ ಗಡಿ ಭಾಗದವರೆಗೆ ಈ ಯೋಜನೆ 85 ಕಿ.ಮೀಟರ್ ವ್ಯಾಪ್ತಿ ಹೊಂದಿದೆ.

ಕೊಪ್ಪಳ ತಾಲೂಕಿನ ಗಿಣಗೇರಿಯಿಂದ ಆರಂಭವಾಗಿ ಗಂಗಾವತಿ, ಕಾರಟಗಿ, ಸಿಂಧನೂರು, ಜವಳಗೇರಾ, ನೀರಮಾನ್ವಿ, ಮಮದಾಪುರ, ರಾಯಚೂರು ಮಾರ್ಗವಾಗಿ ಆಂಧ್ರದ ದೇವರಕದ್ರವರೆಗೆ ಕರ್ನಾಟಕ ವ್ಯಾಪ್ತಿಯ 185 ಕಿಲೋ ಮೀಟರ್ ವ್ಯಾಪ್ತಿಯನ್ನು ಈ ರೈಲು ಲೈನ್ ಹೊಂದಿದೆ. ಆರಂಭದಲ್ಲಿ ಸುಮಾರು 1350 ಕೋಟಿ ರೂಪಾಯಿ ಅಂದಾಜು ವೆಚ್ಚದ ಈ ಕಾಮಗಾರಿ ಈಗ ಬರೋಬ್ಬರಿ 2526 ಕೋಟಿ ರೂಪಾಯಿಗೆ ಏರಿದೆ.

ಕರ್ನಾಟಕದಲ್ಲಿ ರೈಲ್ವೆ ಲೈನ್​​ಗೆ ಈವರೆಗೆ ಒಟ್ಟು 1300 ಕೋಟಿ ರೂಪಾಯಿ ಬಿಡುಗಡೆಯಾಗಿ ಕಾಮಗಾರಿಗೆ ಖರ್ಚಾಗಿದೆ‌. ಯೋಜನೆಗೆ ಅಡಿಗಲ್ಲು ಹಾಕಿದ ಮೇಲೆ ದಶಕಗಳವರೆಗೆ ಈ ಯೋಜನೆ ನೆನೆಗುದಿಗೆ ಬಿದ್ದಿತ್ತು. ಬಳಿಕ ಕುಂಟುತ್ತಾ, ತೆವಳುತ್ತಾ ಸಾಗಿದ ಕಾಮಗಾರಿ 2016ರಲ್ಲಿ ತುಸು ಚೇತರಿಸಿಕೊಂಡಿತು‌. ಕೆ.ವಿರುಪಾಕ್ಷಪ್ಪ ಸಂಸದರಾಗಿದ್ದ ಸಂದರ್ಭದಲ್ಲಿ ಈ ಯೋಜನೆಯ ಭೂ ಸ್ವಾಧೀನಕ್ಕಾಗಿ ಸಿಂಧನೂರಿನಲ್ಲಿ ಭೂ ಸ್ವಾಧೀನ ಕಚೇರಿ ಆರಂಭವಾಯಿತು‌. ಆದರೆ ಕೆಲಸ ಮಾತ್ರ ಪ್ರಾರಂಭವಾಗಲಿಲ್ಲ.

ಬಳಿಕ ಸಂಸದರಾದ ಶಿವರಾಮೇಗೌಡರ ಅವಧಿಯಲ್ಲಿ ಸಿಂಧನೂರಿನಲ್ಲಿನ ಈ ಭೂ ಸ್ವಾಧೀನ ಕಚೇರಿಯಿಂದ ಭೂ ಸ್ವಾಧಿನ ಪ್ರಕ್ರಿಯೆ ಶುರುವಾಯಿತು. ನಂತರದ ಅವಧಿಯಲ್ಲಿ ಸಂಸದರಾದ ಸಂಗಣ್ಣ ಕರಡಿ ಈ ಯೋಜನೆಗೆ ಹಣ ಬಿಡುಗಡೆ ಮಾಡಿಸಿ ಯೋಜನೆಗೆ ಜೀವ ತುಂಬಿದರು. ಈಗ ಸಿಂಧನೂರುವರೆಗೂ ಭೂ ಸ್ವಾಧೀನವಾಗಿ ಕಾಮಗಾರಿ ಪ್ರಗತಿಯಲ್ಲಿದೆ. ಈಗಾಗಲೇ ಗಂಗಾವತಿವರೆಗೂ ರೈಲು ಓಡುತ್ತಿದ್ದು, ಕಾರಟಗಿಯವರೆಗೂ ರೈಲು ಓಡಾಟ ನಡೆಸಲು ಎಲ್ಲಾ ಸಿದ್ಧತೆಯಾಗಿದೆ.

ಓದಿ: ಗೋಹತ್ಯೆ ನಿಷೇಧ ಕಾಯ್ದೆ ಅನುಷ್ಠಾನದ ನಂತರ ಮೊದಲ ಪ್ರಕರಣ ದಾಖಲು: ಸಚಿವ ಪ್ರಭು ಚವ್ಹಾಣ್

ಇನ್ನೇನು ಕೆಲವು ದಿನಗಳಲ್ಲಿ ಕಾರಟಗಿಯವರೆಗೂ ರೈಲು ಓಡಾಟ ನಡೆಸಲಿದೆ ಎನ್ನುತ್ತಾರೆ ಸಂಸದ ಸಂಗಣ್ಣ ಕರಡಿ‌. ಮುನಿರಾಬಾದ್-ಮೆಹಬೂಬನಗರ ರೈಲ್ವೆ ಯೋಜನೆಯು ಪ್ರಮುಖ ವಾಣಿಜ್ಯ ನಗರಗಳಾದ ಗಂಗಾವತಿ, ಕಾರಟಗಿ, ಸಿಂಧನೂರು ಮಾರ್ಗವಾಗಿದ್ದು, ಈ ರೈಲು ಆರಂಭವಾದರೆ ಸಾರಿಗೆ ಸಂಪರ್ಕ ಹಾಗೂ ವ್ಯಾಪಾರ ವಹಿವಾಟಿಗೆ ತುಂಬಾ ಅನುಕೂಲವಾಗಲಿದೆ. ಈ ಯೋಜನೆ ಸಂಪೂರ್ಣವಾಗಿ ಮುಗಿಯಲು ಇನ್ನೂ ಏನಿಲ್ಲವೆಂದರೂ ಮೂರ್ನಾಲ್ಕು ವರ್ಷ ಬೇಕು.

ABOUT THE AUTHOR

...view details