ಕೊಪ್ಪಳ:ಬಡವರ ಉರುವಲು ಬಳಕೆ ಮಾಡದೇ ಅಡುಗೆ ಅನಿಲ ಬಳಸಬೇಕು ಎಂಬ ಉದ್ದೇಶದಿಂದ ಕೇಂದ್ರ ಸರ್ಕಾರ ಉಜ್ವಲ ಯೋಜನೆಯ ಮೂಲಕ ಉಚಿತ ಅನಿಲ ಸಂಪರ್ಕ ಕಲ್ಪಿಸಿದೆ. ಆದರೆ, ಈಗ ಅಡುಗೆ ಅನಿಲ ಸಿಲಿಂಡರ್ ಬೆಲೆ ಗಗನಕ್ಕೆ ಏರಿದ್ದು, ಬಡವರು ಅಡುಗೆ ಅನಿಲ ಸಿಲಿಂಡರ್ ಖರೀದಿಸಲು ಆಗದಂತಾಗಿದೆ. ಹೀಗಾಗಿ, ಉಜ್ವಲ ಯೋಜನೆಯ ಫಲಾನುಭವಿಗಳು ಮತ್ತೆ ಸೌದೆ ಒಲೆಯತ್ತ ಮುಖ ಮಾಡುತ್ತಿದ್ದಾರೆ.
ಉಜ್ವಲ್ ಯೋಜನೆಯ ಫಲಾನುಭವಿಗಳು ಮಾತನಾಡಿದ್ದಾರೆ ಹೊಗೆಮುಕ್ತ ರಾಷ್ಟ್ರ ಮಾಡುವ ಉದ್ದೇಶದಿಂದ ಉಜ್ವಲ ಯೋಜನೆಯಡಿ ಕೇಂದ್ರ ಸರ್ಕಾರ ಬಡವರಿಗೆ (ಬಿಪಿಎಲ್) ಉಚಿತ ಅಡುಗೆ ಅನಿಲ ಸಂಪರ್ಕ ಕಲ್ಪಿಸಿದೆ. ಈ ಸಂದರ್ಭದಲ್ಲಿ ಒಂದು ಬಾರಿ ಅಡುಗೆ ಅನಿಲವನ್ನು ಸಹ ನೀಡಿದ್ದಾರೆ.
ಆದರೆ, ಈಗ ಬಡವರಿಗೆ ಅಡುಗೆ ಅನಿಲ ಖರೀದಿಸಲು ಆಗುತ್ತಿಲ್ಲ. ಇದರಿಂದಾಗಿ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ರಿಯಾಯಿತಿ ದರದಲ್ಲಿ ಅಡುಗೆ ಅನಿಲ ನೀಡಬೇಕು ಎಂಬ ಕೂಗು ಕೇಳಿ ಬಂದಿದೆ.
ಗ್ಯಾಸ್ ಇದ್ದರೆ ಬೇಗ ಅಡುಗೆಯಾಗುತ್ತದೆ ಎಂಬ ಕಾರಣಕ್ಕೆ ಮಹಿಳೆಯರು ಖುಷಿಯಾಗಿ ಉಜ್ವಲ ಯೋಜನೆಯಲ್ಲಿ ಅಡುಗೆ ಅನಿಲ ಸಂಪರ್ಕ ಪಡೆದುಕೊಂಡಿದ್ದಾರೆ. ಆದರೆ, ಈ ಖುಷಿ ಬಹಳ ದಿನಗಳವರೆಗೂ ಉಳಿದಿಲ್ಲ.
ಕಾರಣ ಈಗ ಅಡುಗೆ ಅನಿಲದ ದರ ಏರಿಕೆಯಾಗಿರುವುದು. 2019 ರಲ್ಲಿ ಉಜ್ವಲ ಯೋಜನೆ ಜಾರಿಯದಾಗ ಅಡುಗೆ ಅನಿಲ ದರವು 600 - 770 ರೂಪಾಯಿ ನಡುವಿತ್ತು. ತಮ್ಮ ದುಡಿಮೆಯಲ್ಲಿ 1 ಅಥವಾ 2 ತಿಂಗಳಿಗೊಮ್ಮೆ ಅಡುಗೆ ಅನಿಲ ಖರೀದಿಸಬಹುದು ಎಂದು ಕೊಂಡಿದ್ದರು.
ಅಡುಗೆ ಅನಿಲ ಸಂಪರ್ಕ ಬಂದ ನಂತರ ಸೌದೆ ಒಲೆ ಹಚ್ಚುವುದನ್ನು ಬಿಟ್ಟಿದ್ದಾರೆ. ಅಲ್ಲದೇ, ಬೇಗ ಅಡುಗೆ ಆಗುವುದರಿಂದ ಬಡವರೂ ಸಹ ಅಡುಗೆ ಅನಿಲಕ್ಕೆ ಹೊಂದಿಕೊಂಡಿದ್ದಾರೆ. ಆದರೆ, ಈಗ ಅಡುಗೆ ಅನಿಲ ದರವು 960 ರೂಪಾಯಿಗೆ ಏರಿಕೆಯಾಗಿದೆ. ಪ್ರತಿ ತಿಂಗಳು ಸಾವಿರ ರೂಪಾಯಿಯನ್ನು ಅಡುಗೆ ಅನಿಲ ಖರೀದಿಸಲು ಆಗುತ್ತಿಲ್ಲ. ಇದರಿಂದಾಗಿ ಉಜ್ವಲ ಯೋಜನೆಯ ಫಲಾನುಭವಿಗಳು ಸಿಲಿಂಡರ್ ಖರೀದಿಸುತ್ತಿಲ್ಲ. ಮತ್ತೆ ಸೌದೆ ಒಲೆಯತ್ತ ಮುಖ ಮಾಡಿದ್ದಾರೆ.
ದುಬಾರಿಯಾದ ಕಾಲದಲ್ಲಿ ದಿನಸಿ ಖರೀದಿಸುವುದು ಸಹ ಕಷ್ಟವಾಗಿದೆ. ಇಂಥ ಸಂದರ್ಭದಲ್ಲಿ ಅಡುಗೆ ಅನಿಲ ಬೆಲೆ ಹೆಚ್ಚಾಗಿರುವುದರಿಂದ ಮತ್ತಷ್ಟು ಆರ್ಥಿಕ ಹೊರೆಯಾಗುತ್ತಿದೆ. ಹೀಗಾಗಿ, ಹಲವರು ಅಡುಗೆ ಅನಿಲ ಸಿಲಿಂಡರ್ ಖರೀದಿಸುತ್ತಿಲ್ಲ. ಸರ್ಕಾರ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ರಿಯಾಯಿತಿ ದರದಲ್ಲಿ ಅಡುಗೆ ಅನಿಲ ನೀಡಬೇಕು ಎಂದು ಫಲಾನುಭವಿಗಳು ಆಗ್ರಹಿಸಿದ್ದಾರೆ.
ಕೊಪ್ಪಳ ಜಿಲ್ಲೆಯಲ್ಲಿ ಒಟ್ಟು 1.46 ಲಕ್ಷ ಬಿಪಿಎಲ್ ಕಾರ್ಡುದಾರರಿದ್ದಾರೆ. ಅವರಲ್ಲಿ ಈ ಹಿಂದೆ ಸಿಎಂ ಅನಿಲ ಭಾಗ್ಯ ಯೋಜನೆಯಲ್ಲಿ 5214 ಕುಟುಂಬಗಳಿಗೆ ಅಡುಗೆ ಅನಿಲ ನೀಡಲಾಗಿದೆ. ಈಗ ಈ ಯೋಜನೆ ಇಲ್ಲ.
ಈ ಮಧ್ಯೆ 2019 ರಿಂದ ಮೊದಲ ಹಂತದಲ್ಲಿ 1.10 ಲಕ್ಷ ಕುಟುಂಬಗಳಿಗೆ ಹಾಗೂ ಎರಡನೆಯ ಹಂತದಲ್ಲಿ 25,126 ಕುಟುಂಬಗಳಿಗೆ ಉಜ್ವಲ ಯೋಜನೆಯಲ್ಲಿ ಅಡುಗೆ ಅನಿಲ ಸಂಪರ್ಕ ಕಲ್ಪಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 1.36 ಕುಟುಂಬಗಳು ಉಚಿತವಾಗಿ ಅಡುಗೆ ಅನಿಲದ ಸಂಪರ್ಕ ಪಡೆದಿದ್ದಾರೆ. ಅವರು ಈಗ ಸಿಲಿಂಡರ್ ಖರೀದಿಸಲು ಪರದಾಡುವಂತಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೊಪ್ಪಳ ಸಂಸದ ಸಂಗಣ್ಣ ಕರಡಿ ಈ ಕುರಿತಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗುತ್ತದೆ. ಬಡವರಿಗೆ ಅನುಕೂಲವಾಗುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುವುದಾಗಿ ಹೇಳಿದ್ದಾರೆ.
ಓದಿ:ಬೆಂಗಳೂರು ರೈಲ್ವೆ ವಿಭಾಗದಿಂದ ಮೊದಲ ಬಾರಿಗೆ ಅನ್ಯ ರಾಜ್ಯಕ್ಕೆ ವಿದ್ಯುತ್ ವಾಹನಗಳ ಸಾಗಣೆ