ಕರ್ನಾಟಕ

karnataka

ETV Bharat / state

ನವವೃಂದಾವನ ಗಡ್ಡೆ ವಿವಾದ: ಏಕಸದಸ್ಯ ಪೀಠದ ತೀರ್ಪನ್ನು ತಳ್ಳಿಹಾಕಿದ ಹೈಕೋರ್ಟ್ ದ್ವಿಸದಸ್ಯ ಪೀಠ - etv bharat kannda

ಜಯತೀರ್ಥರ ವೃಂದಾವನಕ್ಕೆ ಯಾವುದೇ ಪೂಜೆ-ಪುನಸ್ಕಾರ ಮಾಡದಂತೆ ನಿರ್ಬಂಧ ಹೇರಿ ಆದೇಶ ಜಾರಿ ಮಾಡಿದ್ದ ಧಾರವಾಡ ಹೈಕೋರ್ಟ್ ಏಕಸದಸ್ಯ ಪೀಠದ ತೀರ್ಪನ್ನು ದ್ವಿಸದಸ್ಯ ಪೀಠ ತಳ್ಳಿಹಾಕಿದೆ.

two-judge-bench-of-dharwad-high-court-give-judgement-over-navavrindavana-gadde-issue
ನವವೃಂದಾವನ ಗಡ್ಡೆ ವಿವಾದ: ಏಕಸದಸ್ಯ ಪೀಠದ ತೀರ್ಪುನ್ನು ತಳ್ಳಿಹಾಕಿದ ಹೈಕೋರ್ಟ್ ದ್ವಿಸದಸ್ಯ ಪೀಠ

By ETV Bharat Karnataka Team

Published : Sep 23, 2023, 9:18 PM IST

ಗಂಗಾವತಿ(ಕೊಪ್ಪಳ):ಮಾಧ್ವ ಸಂಪ್ರದಾಯದ ಪ್ರಮುಖ ಧಾರ್ಮಿಕ ತಾಣವಾದ ತಾಲೂಕಿನ ಆನೆಗೊಂದಿಯ ನವವೃಂದಾವನ ಗಡ್ಡೆಯಲ್ಲಿನ ವಿವಾದಿತ ಜಯತೀರ್ಥ- ರಘುವರ್ಯರ ವೃಂದಾವನದ ಪೂಜೆಯ ಸಂಬಂಧ ಈ ಹಿಂದೆ ಧಾರವಾಡದ ಏಕಸದಸ್ಯ ಪೀಠ ನೀಡಿದ್ದ ಪೂಜೆಯ ನಿರ್ಬಂಧದ ತೀರ್ಪನ್ನು ದ್ವಿಸದಸ್ಯ ಪೀಠ ತಳ್ಳಿ ಹಾಕಿದೆ. ಧಾರವಾಡದ ಹೈಕೋರ್ಟ್​ನ ದ್ವಿಸದಸ್ಯ ಪೀಠದ ಆದೇಶದಿಂದಾಗಿ ಮಂತ್ರಾಲಯದ ರಾಘವೇಂದ್ರ ಸ್ವಾಮೀಜಿಗಳ ಮಠದ ಅನುಯಾಯಿಗಳು, ನವವೃಂದಾವನ ಗಡ್ಡೆಯಲ್ಲಿರುವ ಜಯತೀರ್ಥರ ವೃಂದಾವನಕ್ಕೆ ಈ ಮೊದಲಿನಂತೆ ಪೂಜೆ ಸಲ್ಲಿಸಲು ಅವಕಾಶ ಸಿಕ್ಕಂತಾಗಿದೆ.

ಧಾರವಾಡದ ಹೈಕೋರ್ಟ್​ನ ಆದೇಶ ಹೊರ ಬೀಳುತ್ತಿದ್ದಂತೆಯೆ ಸಂಭ್ರಮಿಸಿದ ಅನುಯಾಯಿಗಳು, ಆನೆಗೊಂದಿ ರಾಯರಮಠದ ಅರ್ಚಕರ ನೇತೃತ್ವದಲ್ಲಿ ತುಂಗಭದ್ರಾ ನದಿಯ ದಡದಲ್ಲಿರುವ ನವವೃಂದಾವನ ಗಡ್ಡೆಗೆ ತೆರಳಿ ಜಯತೀರ್ಥರ ವೃಂದಾವನಕ್ಕೆ ಶೇಷವಸ್ತ್ರ ಅಲಂಕಾರ ಮಾಡಿ, ವಿಶೇಷ ಪೂಜೆ ಸಲ್ಲಿಸಿ ಸಂತಸ ವ್ಯಕ್ತಪಡಿಸಿದರು.

ಏನಿದು ಪ್ರಕರಣ:ಗಂಗಾವತಿ ತಾಲೂಕಿನ ಆನೆಗೊಂದಿ ಬಳಿಯ ತುಂಗಭದ್ರಾ ನದಿ ತಟದಲ್ಲಿರುವ ನವವೃಂದಾವನ ಗಡ್ಡೆಯಲ್ಲಿ ಮಾಧ್ವಮತ ಪ್ರಚಾರಕರ ಒಂಬತ್ತು ಯತಿಗಳ ಭೌತಿಕ ಸಮಾಧಿಗಳಿವೆ. ಈ ಪೈಕಿ ಒಂದು ಸಮಾಧಿ (ವೃಂದಾವನ) ವಿವಾದದ ಕೇಂದ್ರ ಬಿಂದುವಾಗಿದೆ. ರಾಯರಮಠದ ಅನುಯಾಯಿಗಳು ಅದನ್ನು ಜಯತೀರ್ಥರದ್ದು ಎಂದು, ಉತ್ತರಾಧಿ ಮಠದ ಅನುಯಾಯಿಗಳು ಅದೇ ವೃಂದಾವನವನ್ನು ರಘುವರ್ಯ ತೀರ್ಥರದ್ದು ಎಂದು ವಾದಿಸುತ್ತಿರುವುದು ವಿವಾದಕ್ಕೀಡಾಗಿತ್ತು.

ನ್ಯಾಯಾಲಯದ ಮಟ್ಟಿಲೇರಿದ ಪ್ರಕರಣ:ರಘುವರ್ಯ ತೀರ್ಥರ ವೃಂದಾವನವನ್ನು ರಾಯರ ಮಠದವರು, ಜಯತೀರ್ಥರದ್ದು ಎಂದು ವಾದಿಸುತ್ತಿದ್ದು ಮತ್ತು ಅದಕ್ಕೆ ಧಾರ್ಮಿಕ ಕಾರ್ಯಗಳನ್ನು ಹಮ್ಮಿಕೊಳ್ಳುವ ಮೂಲಕ ಯತಿ ಪರಂಪರೆಗೆ ಅಪಚಾರ ಮಾಡುತ್ತಿದ್ದಾರೆ. ಇದಕ್ಕೆ ತಡೆ ನೀಡುವಂತೆ ಕೋರಿ ಈ ಸಂಬಂಧ ಉತ್ತರಾಧಿ ಮಠದ ಅನುಯಾಯಿಗಳು ಧಾರವಾಡದ ಹೈಕೋರ್ಟ್​ ಪೀಠದಲ್ಲಿ ಮನವಿ ಸಲ್ಲಿಸಿದ್ದರು. ಮನವಿ ಪುರಸ್ಕರಿಸಿದ ಧಾರವಾಡ ಹೈಕೋರ್ಟ್ ಪೀಠದ ನ್ಯಾ. ಶಂಕರ್ ಮುಗುದುಮ್ ನೇತೃತ್ವದಲ್ಲಿನ ಏಕಸದಸ್ಯ ಪೀಠ, ಗಡ್ಡಿಯಲ್ಲಿನ ವಿವಾದಿತ ವೃಂದಾವನಕ್ಕೆ ಯಾವುದೇ ಪೂಜೆ-ಪುನಸ್ಕಾರ ಮಾಡದಂತೆ ರಾಯರ ಮಠದ ಅನುಯಾಯಿಗಳಿಗೆ ನಿರ್ಬಂಧ ಹೇರಿ ಸೆ.11ರಂದು ಆದೇಶ ಜಾರಿ ಮಾಡಿದ್ದರು.

ಇದನ್ನು ಪ್ರಶ್ನಿಸಿ ರಾಯರಮಠದ ಪರವಾಗಿ ವಕೀಲರಾದ ಪ್ರಭುಲಿಂಗ ನಾವದಗಿ ಮತ್ತು ಶಿವಪ್ರಸಾದ ಶಾಂತನಗೌಡ ಮೇಲ್ಮನವಿ ಸಲ್ಲಿಸಿದ್ದರು. ಮನವಿ ಆಲಿಸಿದ ಧಾರವಾಡದ ಹೈಕೋರ್ಟ್​ ಪೀಠದ ನ್ಯಾಯಾಧೀಶರಾದ ಕೃಷ್ಣಕುಮಾರ್ ಹಾಗೂ ಬಸವರಾಜ್ ಒಳಗೊಂಡ ದ್ವಿಸದಸ್ಯರ ನ್ಯಾಯಪೀಠವು, ಈ ಹಿಂದೆ ನೀಡಿದ್ದ ಆದೇಶವನ್ನು ತಳ್ಳಿ ಹಾಕಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆನೆಗೊಂದಿ ರಾಯರಮಠದ ವ್ಯವಸ್ಥಾಪಕ ಈಡಪನೂರು ಸುಮಂತ ಕುಲಕರ್ಣಿ, ನ್ಯಾಯಪೀಠದ ಆದೇಶದಿಂದಾಗಿ ಸತ್ಯಕ್ಕೆ ಜಯ ಸಂದಂತಾಗಿದೆ. ಜಯತೀರ್ಥರ ಮೂಲಕ ವೃಂದಾವನ ಆನೆಗೊಂದಿಯಲ್ಲಿಯೇ ಇದೆ ಎಂಬುದಕ್ಕೆ ಸಾಕ್ಷಿ ಸಿಕ್ಕಂತಾಗಿದ್ದು, ದೈನಿಕ ಧಾರ್ಮಿಕ ಕಾರ್ಯ ನಡೆಯುತ್ತವೆ ಎಂದರು.

ಇದನ್ನೂ ಓದಿ:ಸರ್ಕಾರದ ಪ್ರಾಧಿಕಾರಗಳು ಸಿಎ ನಿವೇಶನಗಳ ಪಾಲಕರು ಮಾತ್ರ, ಮಾರಾಟ ಅಸಾಧ್ಯ: ಹೈಕೋರ್ಟ್

ABOUT THE AUTHOR

...view details