ಕೊಪ್ಪಳ: ಗಂಗಾವತಿ ನಗರದಲ್ಲಿ ಇತ್ತೀಚೆಗೆ ಧಾರ್ಮಿಕ ಘೋಷಣೆ ಕೂಗುವಂತೆ ಒತ್ತಾಯಿಸಿ ಹಲ್ಲೆ ಮಾಡಿದರು ಎಂದು ಮೆಹೆಬೂಬ್ ನಗರದ ಹುಸೇನಸಾಬ್ ಎಂಬ ವೃದ್ಧನ ನೀಡಿದ ದೂರಿಗೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಸಾಗರ್ ಹಾಗೂ ನರಸಪ್ಪ ಬಂಧಿತರು.
ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ ಮಾತನಾಡಿ, "ವೃದ್ಧನಿಗೆ ಹಲ್ಲೆ ಮಾಡಿದ ಆರೋಪದಡಿ ಗಂಗಾವತಿಯ ಕುವೆಂಪು ಬಡಾವಣೆಯ ಸಾಫ್ಟ್‌ವೇರ್ ಇಂಜಿನಿಯರ್ ಸಾಗರ್ ಶೆಟ್ಟಿ ಕಲ್ಕಿ ಹಾಗೂ ಕಲ್ಲಪ್ಪನ ಕ್ಯಾಂಪ್‌ನ ನರಸಪ್ಪ ದನಕಾಯರ ಎಂಬಿಬ್ಬರನ್ನು ಬಂಧಿಸಲಾಗಿದೆ. ಇದುವರೆಗೆ ಎಲ್ಲ ಆಯಾಮಗಳಿಂದ ತನಿಖೆ ಮಾಡಲಾಗಿದೆ. ವೃದ್ಧನಿಗೆ ಜೈ ಶ್ರೀರಾಮ್ ಹೇಳುವಂತೆ ಒತ್ತಡ ಹೇರಲಾಗಿದೆ ಎನ್ನುವ ಆರೋಪಕ್ಕೆ ಯಾವುದೇ ಆಧಾರ ಲಭಿಸಿಲ್ಲ. ಹುಸೇನಸಾಬ್ ಗಡ್ಡಕ್ಕೆ ಬೆಂಕಿ ಹಚ್ಚಲಾಗಿತ್ತು ಎನ್ನುವುದಕ್ಕೂ ದಾಖಲೆ ಲಭಿಸಿಲ್ಲ" ಎಂದರು.
"ಪಾನಮತ್ತರಾಗಿದ್ದ ಆರೋಪಿಗಳಿಗೆ ವೃದ್ಧ ಡ್ರಾಪ್ ನೀಡುವಂತೆ ಕೇಳಿಕೊಂಡಿದ್ದ. ಅವರು ಬೈಕ್‌ನಲ್ಲಿ ಕೂರಿಸಿಕೊಂಡು ಹೋಗುವಾಗ ನರಸಪ್ಪ ಮಧ್ಯದಲ್ಲಿ ಕುಳಿತಿದ್ದ ವೃದ್ಧನ ಟೋಪಿ ಜಗ್ಗಿದ್ದಾನೆ. ಇದಕ್ಕೆ ಕೋಪಗೊಂಡ ವೃದ್ಧ ಬೈದಿದ್ದಾರೆ. ಈ ಸಂದರ್ಭದಲ್ಲಿ ಆಕ್ರೋಶಗೊಂಡ ಯುವಕರು ರೈಲ್ವೆ ಸೇತುವೆ ಬಳಿ ಕರೆದುಕೊಂಡು ಹೋಗಿ ಹಲ್ಲೆ ಮಾಡಿ, ವೃದ್ಧನ ಜೇಬಿನಲ್ಲಿದ್ದ 250 ರೂಪಾಯಿ ಕಿತ್ತುಕೊಂಡಿದ್ದಾರೆ. ನಂತರ ಅಲ್ಲಿಂದ ಪರಾರಿಯಾಗಿದ್ದಾರೆ. ತಲೆಗೆ ಬಿಯರ್ ಬಾಟಲಿಯಿಂದ ಹೊಡೆದಿದ್ದಾರೆ ಎಂದು ಹೇಳುತ್ತಿದ್ದಾರೆ, ಆ ರೀತಿ ಏನೂ ನಡೆದಿಲ್ಲ. ವೃದ್ಧನ ತಲೆಗೆ ಸಣ್ಣ ಗಾಯವೂ ಆಗಿಲ್ಲ. ಈ ಪ್ರಕರಣ ಸಂಬಂಧ ಹೆಚ್ಚಿನ ತನಿಖೆ ಮಾಡುತ್ತೇವೆ" ಎಂದು ಮಾಹಿತಿ ನೀಡಿದರು.