ಕೊಪ್ಪಳ:ಒಳಹರಿವಿನ ಪ್ರಮಾಣ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ತಾಲೂಕಿನ ಮುನಿರಾಬಾದ್ ಬಳಿ ಇರುವ ತುಂಗಭದ್ರಾ ಜಲಾಶಯ ಬಹುತೇಕ ತುಂಬಿದೆ. ಹೀಗಾಗಿ ಜಲಾಶಯದ 33 ಕ್ರಸ್ಟ್ ಗೇಟ್ಗಳಿಂದ ನದಿಗೆ ನೀರು ಬಿಡುಗಡೆ ಮಾಡಲಾಗಿದೆ.
100 ಟಿಎಂಸಿ ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಸದ್ಯ 94.97 ಟಿಎಂಸಿ ನೀರು ಸಂಗ್ರಹವಿದೆ. ಜಲಾಶಯಕ್ಕೆ 1.86.973 ಕ್ಯೂಸೆಕ್ ಒಳಹರಿವು ಇದೆ. 33 ಕ್ರಸ್ಟ್ ಗೇಟ್ಗಳ ಮೂಲಕ ಅಪಾರ ಪ್ರಮಾಣದ ನೀರನ್ನು ಹೊರ ಬಿಡಲಾಗಿದೆ. ಪರಿಣಾಮವಾಗಿ ಜಲಾಶಯದ ಮುಂಭಾಗದಲ್ಲಿರುವ ಸೇತುವೆ ಮುಳುಗಡೆಯಾಗಿದೆ.
ಸೇತುವೆ ಮೇಲೆ ವಾಹನ ಸಂಚಾರ ನಿಷೇಧಿಸುವ ಬಗ್ಗೆ ಆದೇಶ ಆದರೆ, ಅಪಾಯ ಲೆಕ್ಕಿಸದೆ ಈ ಸೇತುವೆ ಮೇಲೆ ಫೋಟೋ ತೆಗೆಸಿಕೊಳ್ಳಲು ಜನರು ಮುಗಿಬಿದ್ದಿದ್ದರು. ಪರಿಸ್ಥಿತಿಯನ್ನು ಅರಿತ ಸ್ಥಳೀಯ ಪೊಲೀಸರು ಜನರನ್ನು ಸೇತುವೆಯಿಂದ ಹೊರಗೆ ಕಳುಹಿಸಿದರು. ನಂತರ ಆ ಸೇತುವೆ ರಸ್ತೆಯನ್ನು ಬಂದ್ ಮಾಡಿಸಿದರು.
ಕಂಪ್ಲಿ ಸೇತುವೆ ಮುಳುಗಡೆಗೆ ಕ್ಷಣಗಣನೆ: ಅಂತರ ಜಿಲ್ಲಾ ಸಂಪರ್ಕ ಸ್ಥಗಿತ
ಗಂಗಾವತಿ ತಾಲೂಕಿನ ಚಿಕ್ಕ ಜಂತಕಲ್ ಸಮೀಪವಿರುವ ತುಂಗಭದ್ರಾ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಕಂಪ್ಲಿ ಸೇತುವೆಗೆ ಮುಳುಗಡೆಯ ಭೀತಿ ಎದುರಾಗಿದೆ. ಇದರಿಂದಾಗಿ ಬಳ್ಳಾರಿ-ಕೊಪ್ಪಳ ಜಿಲ್ಲೆ ನೇರ ಅಂತರ ಜಿಲ್ಲಾ ಸಂಚಾರ ಸ್ಥಗಿತವಾಗಲಿದೆ. ಹೀಗಾಗಿ ಜನ ತಮ್ಮ ಅಗತ್ಯದ ಪ್ರಯಾಣಕ್ಕೆ ಸುತ್ತು ಬಳಸಿ ಪ್ರಯಾಣ ಮಾಡಬೇಕಾಗುತ್ತದೆ.
ಕಂಪ್ಲಿ ಸೇತುವೆ ಮೇಲಿನ ತಾತ್ಕಾಲಿಕ ಜನ ಮತ್ತು ವಾಹನ ಸಂಚಾರವನ್ನು ಈಗಾಗಲೇ ಕೊಪ್ಪಳ ಜಿಲ್ಲೆಯ ಸಹಾಯಕ ಆಯುಕ್ತ ನಾರಾಯಣ ಕನಕರೆಡ್ಡಿ ಸ್ಥಗಿತಗೊಳಿಸಿ ಆದೇಶ ಹೊರಡಿಸಿದ್ದಾರೆ. ತುಂಗಭದ್ರಾ ಜಲಾಶಯದಿಂದ ಈಗಾಗಲೇ ಎಂಭತ್ತು ಸಾವಿರ ಕ್ಯೂಸೆಕ್ ಪ್ರಮಾಣದ ನೀರನ್ನು ನದಿಗೆ ಹರಿಸಲಾಗುತ್ತಿದೆ. ಈಗಾಗಲೇ ಸೇತುವೆ ಮುಳುಗಡೆಯ ಹಂತಕ್ಕೆ ಬಂದಿದೆ.
ಇದನ್ನೂ ಓದಿ:ಉಸ್ತುವಾರಿ ಮುಖ್ಯಮಂತ್ರಿ ಆಗಿ ಕರ್ತವ್ಯ ನಿರ್ವಹಿಸಿ: ಬಿಎಸ್ವೈಗೆ ಗೆಹ್ಲೋಟ್ ಸೂಚನೆ