ಕೊಪ್ಪಳ:ಕ್ಷಯ ರೋಗಿಗಳನ್ನು ಪತ್ತೆ ಮಾಡಿ ಅವರಿಗೆ ಸೂಕ್ತ ಚಿಕಿತ್ಸೆ ದೊರಕಿಸಿ ಕೊಡುವ ನಿಟ್ಟಿನಲ್ಲಿ ರಾಜ್ಯದಲ್ಲಿ ಮೊದಲ ಬಾರಿಗೆ ಕೊಪ್ಪಳದಲ್ಲಿ ಕ್ಷಯರೋಗಿಗಳಿಗಾಗಿ ಹೆಲ್ಪ್ಲೈನ್ ಆರಂಭವಾಗುತ್ತಿದೆ. ಸಹಾಯವಾಣಿ ಕೇಂದ್ರಕ್ಕೆ ಬೇಕಾದ ಎಲ್ಲಾ ಅಗತ್ಯ ಸಿದ್ಧತೆಯನ್ನು ಆರೋಗ್ಯ ಇಲಾಖೆ ಈಗಾಗಲೇ ಮಾಡಿಕೊಂಡಿದ್ದು ಸೇವೆಗೆ ಸಜ್ಜಾಗಿದೆ.
ಕ್ಷಯ ರೋಗ ನಿಯಂತ್ರಣಕ್ಕಾಗಿ ಸರ್ಕಾರ ಅನೇಕ ಕಾರ್ಯಕ್ರಮಗಳನ್ನು ರೂಪಿಸಿದೆ. ಆದರೂ ಸಹ ಕ್ಷಯರೋಗಿಗಳ ಪತ್ತೆ ಸಂಪೂರ್ಣವಾಗಿ ಆಗುತ್ತಿಲ್ಲ. ಕ್ಷಯರೋಗಿಗಳ ಪತ್ತೆ ಮಾಡಿ ಬಳಿಕ ಅವರನ್ನು ಸೂಕ್ತ ಚಿಕಿತ್ಸೆಗೆ ಒಳಪಡಿಸಲು ಹೆಲ್ಪ್ಲೈನ್ ಆರಂಭಿಸಲು ಚಿಂತನೆ ನಡೆಸಿ ರಾಜ್ಯದಲ್ಲಿಯೇ ಮೊದಲ ಬಾರಿಗೆ ಕೊಪ್ಪಳದಲ್ಲಿ ಸಹಾಯವಾಣಿ ಪ್ರಾರಂಭಿಸಲಾಗುತ್ತಿದೆ.
ಇಲ್ಲಿನ ಹಳೆ ಜಿಲ್ಲಾಸ್ಪತ್ರೆ ಆವರಣದಲ್ಲಿರುವ ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿಗಳ ಕಚೇರಿಯಲ್ಲಿ ಈ ಸಹಾಯವಾಣಿ ಕೇಂದ್ರ ಪ್ರಾರಂಭವಾಗುತ್ತಿದ್ದು, 2021 ರ ಜ.04 ರಂದು ಅಧಿಕೃತವಾಗಿ ಕಾರ್ಯಾರಂಭ ಮಾಡಲಿದೆ. ಈ ಸಹಾಯವಾಣಿ ಕೇಂದ್ರದಲ್ಲಿ ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ನಾಲ್ಕು ಜನ ಸಿಬ್ಬಂದಿ ಕಾರ್ಯ ನಿರ್ವಹಿಸಲಿದ್ದಾರೆ. ಕ್ಷಯರೋಗಿಗಳ ಪತ್ತೆ ಬಳಿಕ ಅವರಿಗೆ ಚಿಕಿತ್ಸೆ, ವೈದ್ಯಕೀಯ ಸಲಹೆ, ಗುಣಾತ್ಮಕ ಸೇವೆ ಒದಗಿಸಲು ವ್ಯವಸ್ಥೆ ಮಾಡಲಾಗಿದೆ.