ಕೊಪ್ಪಳ :ಜನವರಿ 22 ರಂದು ಅಯೋಧ್ಯೆಯಲ್ಲಿ ಮರ್ಯಾದಾ ಪುರುಷೋತ್ತಮ ಶ್ರೀರಾಮನ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ತೆರಳಲು ಕೊಪ್ಪಳದ ಅಂಜನಾದ್ರಿಯಿಂದ ಅಯೋಧ್ಯೆಗೆ ರೈಲು ಓಡಿಸಲು ಸಿದ್ದತೆ ನಡೆದಿದೆ ಎಂದು ಸಂಸದ ಸಂಗಣ್ಣ ಕರಡಿ ಅವರು ಹೇಳಿದರು.
ಕೊಪ್ಪಳದ ಭಾಗ್ಯನಗರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಿಕಸಿತ ಭಾರತ ಯಾತ್ರೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ರಾಮಮಂದಿರ ಉದ್ಘಾಟನೆಯಲ್ಲಿಯೂ ಕಾಂಗ್ರೆಸ್ಸಿನವರು ರಾಜಕಾರಣ ಮಾಡುತ್ತಿದ್ದಾರೆ. ರಾಹುಲ್ ಗಾಂಧಿ ರಾಮಮಂದಿರ ಉದ್ಘಾಟನೆ ಕಾರ್ಯಕ್ರಮವನ್ನ ಇದು ಬಿಜೆಪಿಯವರ ಕಾರ್ಯಕ್ರಮ ಎನ್ನುತ್ತಿದ್ದಾರೆ. ಶ್ರೀರಾಮನ ಬದಲಿಗೆ ವಾಲ್ಮೀಕಿ ಮಂದಿರ ಆಗಬೇಕು ಎನ್ನುತ್ತಾರೆ. ಯಾವುದೇ ಧಾರ್ಮಿಕ ಕಾರ್ಯಕ್ರಮವನ್ನು ರಾಜಕೀಯಕ್ಕೆ ಬಳಸಿಕೊಳ್ಳಲು ಆಗುತ್ತೇನು? ಶ್ರೀರಾಮನನ್ನು ಪರಿಚಯಿಸಿದ್ದೇ ವಾಲ್ಮೀಕಿ ಎನ್ನುವುದು ಸಾರ್ವಕಾಲಿಕ ಸತ್ಯ. ರಾಜಕೀಯಕ್ಕಾಗಿ ವಿರೋಧಿ ಹೇಳಿಕೆ ನೀಡಬಾರದು ಎಂದರು.
ಉಡಾನ್ ಯೋಜನೆಗೆ ಹಣ ಕೊಡಿಸಿ: 16 ವರ್ಷಗಳ ಹಿಂದೆ ಅಡಿಗಲ್ಲು ಹಾಕಿದ್ದ ಮೆಹಬೂಬ್ ನಗರ - ಮುನಿರಾಬಾದ್ ರೈಲ್ವೇ ಕಾಮಗಾರಿ ನನೆಗುದಿಗೆ ಬಿದ್ದಿತ್ತು. ಆದರೆ, ನನ್ನ ಅವಧಿಯಲ್ಲಿ ಕಾಮಗಾರಿ ಆರಂಭವಾಗಿ ಈ ತಿಂಗಳ ಅಂತ್ಯಕ್ಕೆ ಸಿಂಧನೂರುವರೆಗೂ ರೈಲು ಓಡಲಿದೆ. ಈಗಿನ ಸಂಸದರಿಂದ ಕೊಪ್ಪಳ ಜಿಲ್ಲೆ ಅಭಿವೃದ್ಧಿಯಾಗಿಲ್ಲ ಎನ್ನುವ ಸಚಿವ ಶಿವರಾಜ ತಂಗಡಗಿಗೆ ಚಾಟಿ ಬೀಸಿದ ಅವರು, ನಿಮಗೆ ಜಿಲ್ಲೆಯ ಬಗ್ಗೆ ಕಾಳಜಿ ಇದ್ದರೆ ಮೊದಲು ಉಡಾನ್ ಯೋಜನೆಗೆ ರಾಜ್ಯ ಸರ್ಕಾರದಿಂದ ಹಣ ಕೊಡಿಸಿ. ಮೊದಲು ದರೋಜಿ ಬಾಗಲಕೋಟೆ ರೈಲ್ವೆ ಲೈನ್ಗೆ ರಾಜ್ಯ ಸರ್ಕಾರದ ಹಣ ಕೊಡಿಸಿ. ಅದನ್ನೆಲ್ಲ ಬಿಟ್ಟು ನಾವೇನು ಮಾಡಿಲ್ಲ ಎನ್ನುವ ಉದ್ದಟತನದ ಮಾತನಾಡದಿರಿ ಎಂದರು.