ಕೊಪ್ಪಳ: ಸಾಲಸೂಲ ಮಾಡಿ ಟೊಮೇಟೊ ಬೆಳೆದಿದ್ದ ಜಿಲ್ಲೆಯ ರೈತರು ಈಗ ಸಂಕಷ್ಟಕ್ಕೆ ಈಡಾಗಿದ್ದಾರೆ. ಮಾರ್ಕೆಟ್ನಲ್ಲಿ ಟೊಮೇಟೊ ದರ ಪಾತಾಳಕ್ಕೆ ಕುಸಿದ ಪರಿಣಾಮ ರೈತರು ಟೊಮೇಟೊ ಹಣ್ಣನ್ನು ಕಟಾವು ಮಾಡದೇ ಹಾಗೆ ಜಮೀನಿನಲ್ಲಿಯೇ ಬಿಟ್ಟಿದ್ದಾರೆ. ಹೀಗಾಗಿ ಜಿಲ್ಲೆಯ ನೂರಾರು ಎಕರೆಯಲ್ಲಿ ಬೆಳೆದ ಟೊಮೇಟೊ ಹಣ್ಣು ನೆಲವನ್ನು ಕೆಂಪಾಗಿಸಿದೆ.
ಹೌದು, ಮಾರುಕಟ್ಟೆಯಲ್ಲಿ ರೈತರಿಂದ ಖರೀದಿಯಾಗುವ ಟೊಮೇಟೊ ಬೆಲೆ ಪಾತಾಳಕ್ಕೆ ಕುಸಿದಿದೆ. ಸುಮಾರು 7 ರಿಂದ 8 ಕೆಜಿಯ ಟೊಮೇಟೊ ಹಣ್ಣಿರುವ ಒಂದು ಬುಟ್ಟಿಗೆ ಮಾರುಕಟ್ಟೆಯಲ್ಲಿ ಕೇವಲ 20 ರಿಂದ 25 ರೂಪಾಯಿ ದರದಲ್ಲಿ ಖರೀದಿಸಲಾಗುತ್ತದೆ. ಟೊಮೇಟೊ ಬೆಲೆ ಕುಸಿತ ಕಂಡಿರುವುದು ಟೊಮೇಟೊ ಬೆಳೆದ ರೈತರ ಕಣ್ಣೀರಿಗೆ ಕಾರಣವಾಗಿದೆ. ಒಂದು ವೇಳೆ ಕಟಾವು ಮಾಡಿಸಿದರೆ ಕಟಾವು ಮಾಡಿದ ಕಾರ್ಮಿಕರಿಗೆ ಕೂಲಿ ನೀಡಲು ಸಹ ಹಣ ಬರುತ್ತಿಲ್ಲ. ಇದರಿಂದಾಗಿ ಟೊಮೇಟೊ ಹಣ್ಣನ್ನು ಕಟಾವು ಮಾಡದೆ ರೈತರು ಜಮೀನಿನಲ್ಲಿ ಹಾಗೆಯೇ ಬಿಟ್ಟಿದ್ದಾರೆ.
ಕೃಷಿ ಇಲಾಖೆಯ ಅಧಿಕಾರಿಗಳು ನೀಡಿದ ಅಧಿಕೃತ ಮಾಹಿತಿ ಪ್ರಕಾರ, ಜಿಲ್ಲೆಯಲ್ಲಿ ಸುಮಾರು 600 ಹೆಕ್ಟೇರ್ಗೂ ಅಧಿಕ ಪ್ರದೇಶದಲ್ಲಿ ಟೊಮೇಟೊ ಬೆಳೆಯಲಾಗಿದೆ. ಈ 600 ಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ಟೊಮೇಟೊ ಫಸಲು ಬಂದಿದೆ. ಅಲ್ಲದೆ ರೈತರು ಸಸಿ ನಾಟಿ ಮಾಡಿದ್ದಾರೆ. ಈಗ ಟೊಮೇಟೊ ಬೆಲೆ ಕುಸಿತ ಕಂಡಿರೋದು ರೈತರಲ್ಲಿ ನಿರಾಸೆ ಮೂಡಿಸಿದೆ. ಹೀಗಾಗಿ ಜಿಲ್ಲೆಯ ನೂರಾರು ಹೆಕ್ಟೇರ್ ಪ್ರದೇಶದಲ್ಲಿ ಟೊಮೇಟೊ ಕಟಾವು ಆಗದೆ ಹಾಗೆ ಬಿಟ್ಟಿದ್ದಾರೆ.