ಕೊಪ್ಪಳ: ಜಾನಪದ ಕಲೆಗಳು ಅನೇಕ ಕಲೆಗಳಿಗೆ ತಾಯಿ ಬೇರು ಇದ್ದಂತೆ. ಹೀಗಾಗಿಯೇ ಜಾನಪದ ಕಲೆಗಳೆಂದರೆ ಜನರಿಗೆ ಈಗಲೂ ಅಚ್ಚುಮೆಚ್ಚು. ಇಂದಿನ ದೂರದರ್ಶನ, ಸಿನಿಮಾ ಮಾಧ್ಯಮಗಳ ಪರಿಕಲ್ಪನೆಗೆ ಈ ಜಾನಪದ ಕಲೆ ಅಡಿಪಾಯ ಹಾಕಿತು ಎಂದರೆ ತಪ್ಪಾಗುವುದಿಲ್ಲ. ಅಂತಹ ಹೆಗ್ಗಳಿಕೆಯಲ್ಲಿ ಮೊದಲ ಸ್ಥಾನದಲ್ಲಿ ತೊಗಲು ಗೊಂಬೆಯಾಟ ನಿಲ್ಲುತ್ತದೆ.
ಇಂದಿನ ಪೀಳಿಗೆಗೆ ತೊಗಲು ಗೊಂಬೆಯಾಟದ ಬಗ್ಗೆ ಗೊತ್ತಿಲ್ಲ. ಅಪರೂಪದ ಜಾನಪದ ಕಲೆಯಾಗಿರುವ ತೊಗಲು ಗೊಂಬೆ ಆಟ ಇಂದು ಮೂಲೆಗುಂಪಾಗುವತ್ತ ಸಾಗಿದೆ.
ಪರದೆಯ ಹಿಂದೆ ಕುಳಿತು ತಾಳ-ಮೇಳಗಳೊಂದಿಗೆ ತೊಗಲಿನ ಬೊಂಬೆಗಳನ್ನು ಕೈಬೆರಳಿನಿಂದಲೇ ಕುಣಿಸುತ್ತಾ ಒಂದು ಕಥೆಯನ್ನು ಅಥವಾ ಪ್ರಸಂಗವನ್ನು ಮನಮುಟ್ಟುವಂತೆ ಹೇಳುವ ಕಲೆಯೇ ಈ ತೊಗಲು ಗೊಂಬೆ ಆಟ. ಮನರಂಜನೆಯ ಮಾಧ್ಯಮಗಳು ಇಲ್ಲದ ಸಂದರ್ಭದಲ್ಲಿ ಜನರಿಗೆ ಮನರಂಜನೆಯ ಜೊತೆಗೆ ನೀತಿ ಕಥೆಗಳನ್ನು, ಪೌರಾಣಿಕ ಕಥೆಗಳನ್ನು ಮನಮುಟ್ಟುವಂತೆ ತಲುಪಿಸುತ್ತಿದ್ದ ಕಲಾ ವೇದಿಕೆಯಾಗಿತ್ತು.
ಮರೆಯಾಗುತ್ತಿದೆ ಜಾನಪದ ಶ್ರೀಮಂತಿಕೆಯ ತೊಗಲು ಗೊಂಬೆಯಾಟ ತೊಗಲು ಗೊಂಬೆ ಆಟದ ಕಲೆಯಿಂದಲೇ ಇಂದಿನ ದೂರದರ್ಶನ, ಸಿನಿಮಾ ಮಾಧ್ಯಮ ಜನ್ಮ ತಾಳಲು ಕಾರಣವಾಯಿತು ಎನ್ನಬಹುದು. ಹೀಗಾಗಿ ತೊಗಲು ಗೊಂಬೆ ಆಟ ಅನೇಕ ಜಾನಪದ ಕಲೆಗಳ ತಾಯಿ ಬೇರು ಎಂದು ಬಣ್ಣಿಸುತ್ತಾರೆ. ಪೌರಾಣಿಕ, ಐತಿಹಾಸಿಕ ಕಥೆಗಳ ಪಾತ್ರಗಳನ್ನು ಚರ್ಮದಿಂದ ತಯಾರಿಸಿದ ಗೊಂಬೆಗಳ ಮೂಲಕ ತಾಳಮದ್ದಳೆ ಮೇಳದೊಂದಿಗೆ ನಿರೂಪಿಸುತ್ತಾರೆ.
ತೊಗಲು ಗೊಂಬೆ ಆಟ ನೋಡುತ್ತಿದ್ದರೆ ನಮ್ಮ ಕಣ್ಣಮುಂದೆ ಆ ಸನ್ನಿವೇಶ ನಡೆಯುತ್ತಿದೆಯೇನೋ ಎಂಬ ಭಾವನೆ ಬರುತ್ತದೆ. ರಾಮಾಯಣ, ಮಹಾಭಾರತದ ಕಥಾ ಸನ್ನಿವೇಶಗಳನ್ನು ತೊಗಲು ಗೊಂಬೆಯಾಟದಲ್ಲಿ ಮನಮುಟ್ಟುವಂತೆ ನಿರೂಪಿಸಲಾಗುತ್ತದೆ. ಈ ಹಿಂದೆ ಮಳೆಯಾಗದ ಸಂದರ್ಭದಲ್ಲಿ ತೊಗಲು ಗೊಂಬೆ ಆಟ ಆಡಿಸಿದರೆ ಮಳೆ ಬರುತ್ತದೆ ಎಂಬ ನಂಬಿಕೆ ಇತ್ತು. ಹೀಗಾಗಿ ಗ್ರಾಮೀಣ ಪ್ರದೇಶದಲ್ಲಿ ತೊಗಲು ಗೊಂಬೆ ಆಟ ಆಡಿಸುವ ಪರಂಪರೆ ಬೆಳೆದು ಬಂದಿದೆ. ಈಗಲೂ ಮಳೆಯಾಗದೆ ಇದ್ದರೆ ಗ್ರಾಮೀಣ ಪ್ರದೇಶದಲ್ಲಿ ತೊಗಲು ಗೊಂಬೆ ಆಟ ಆಡಿಸುತ್ತಾರೆ.
ಆದರೆ ಇತ್ತೀಚೆಗೆ ತೊಗಲು ಗೊಂಬೆ ಕಲಾವಿದರು ಸಿಗುವುದು ಅತೀ ವಿರಳ ಎಂಬಂತಾಗಿದೆ. ಇನ್ನು ಕೊಪ್ಪಳ ತಾಲೂಕಿನ ಮೋರನಾಳ ಗ್ರಾಮದಲ್ಲಿ ಈಗ ಎರಡು ಕುಟುಂಬಗಳನ್ನು ಹೊರತುಪಡಿಸಿದರೆ ಜಿಲ್ಲೆಯಲ್ಲಿ ತೊಗಲು ಗೊಂಬೆ ಆಟವಾಡಿಸುವ ಕಲಾವಿದರು ಕಾಣ ಸಿಗುವುದು ಕಷ್ಟವಾಗಿದೆ.
ಇದನ್ನೂ ಓದಿ: ತೊಗಲುಗೊಂಬೆ ಕಲಾವಿದ ಕೇಶಪ್ಪ ಶಿಳ್ಳಿಕ್ಯಾತರಿಗೆ ಒಲಿದ ರಾಜ್ಯೋತ್ಸವ ಪ್ರಶಸ್ತಿ
ಸಾಂಪ್ರದಾಯಿಕ ಕಲೆಯಾದ, ಜಾನಪದ ಶ್ರೀಮಂತಿಕೆಯ ಈ ತೊಗಲು ಗೊಂಬೆಯಾಟ ಕಲೆಯನ್ನು ಉಳಿಸಬೇಕಿದೆ. ಇಂದಿನ ಪೀಳಿಗೆಗೆ ತೊಗಲು ಗೊಂಬೆ ಆಟದ ಕಲೆಯ ಕಲಿಕಾ ಶಿಬಿರಗಳನ್ನು ಆಯೋಜಿಸುವ ಮೂಲಕ ಮುಂದಿನ ಪೀಳಿಗೆಗೆ ಉಳಿಸಬೇಕು ಎನ್ನುತ್ತಾರೆ ತೊಗಲು ಗೊಂಬೆಯಾಟದ ಕಲಾವಿದರು.
ಕೊಪ್ಪಳ ಜಿಲ್ಲೆಯಲ್ಲಿರುವ ಹಾಗೂ ಬೇರೆ ಬೇರೆ ಕಡೆ ಬೆರಳೆಣಿಕೆಷ್ಟಿರುವ ತೊಗಲು ಗೊಂಬೆ ಕಲಾವಿದರು ದೇಶ ಮಾತ್ರವಲ್ಲದೆ ಕಡಲಾಚೆಗೂ ತೆರಳಿ ತೊಗಲು ಗೊಂಬೆ ಆಟದ ಪ್ರದರ್ಶನಗಳನ್ನು ನೀಡಿರುವುದು ಈ ಕಲೆಯ ಹೆಗ್ಗಳಿಕೆಯಾಗಿದೆ.