ಗಂಗಾವತಿ: ಸಂಗಾಪುರ ಗ್ರಾಮದಲ್ಲಿ ಈ ಹಿಂದೆ ಶಾಂತಿ ಕದಡುವ ಸಂಬಂಧಿಸಿದಂತ ಘಟನೆಗಳು ಜರುಗಿದ್ದು ಮತ್ತೆ ಸಮಾಜದಲ್ಲಿ ಶಾಂತಿ ಕದಡುವ ಸಾಧ್ಯತೆ ಇರುವ ಹಿನ್ನೆಲೆ ಜು.20ರಿಂದ 30ರ ವರೆಗೆ ಆಯೋಜಿಸಿದ್ದ ಮೊಹರಂ ಹಬ್ಬವನ್ನು ಗ್ರಾಮದಲ್ಲಿ ನಿಷೇಧಿಸಿ ಗಂಗಾವತಿ ತಾಲೂಕು ತಹಸೀಲ್ದಾರ್ ಮಂಜುನಾಥ ಹಿರೇಮಠ ಆದೇಶ ಹೊರಡಿಸಿದ್ದಾರೆ. ಮೊಹರಂ ಹಬ್ಬ ನಿಷೇಧ ಮಾತ್ರವಲ್ಲ, ಗಂಗಾವತಿ ಗ್ರಾಮೀಣ ಪೊಲೀಸರು ನೀಡಿದ ವರದಿ ಪರಿಶೀಲಿಸಿ ಗ್ರಾಮದಲ್ಲಿ ಹತ್ತು ದಿನಗಳ ಕಾಲ ಕಲಂ 144 ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿ, ಆದೇಶ ಹೊರಡಿಸಿದ್ದಾರೆ.
ಸಂಗಾಪುರ ಗ್ರಾಮದಲ್ಲಿ ಈ ಹಿಂದೆ ಮೊಹರಂ ಹಬ್ಬದ ಸಂದರ್ಭದಲ್ಲಿ ಅಲಾಯಿ ಕುಣಿತದ ವಿಚಾರಕ್ಕೆ ಸಮುದಾಯಗಳ ಮಧ್ಯೆ ಮಾತಿನ ಚಕಮಕಿ ನಡೆದು ಅದು ಗ್ರಾಮದ ಶಾಂತಿ ಭಂಗಕ್ಕೆ ಕಾರಣವಾಗಿತ್ತು. ಅದು ಈಗಲೂ ಮುಂದುವರಿಯುವ ಸೂಚನೆ ಸಿಕ್ಕಿದ್ದು, ಸಣಪುಟ್ಟ ಜಗಳ ಸಂಘರ್ಷಕ್ಕೆ ಕಾರಣವಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಗ್ರಾಮದಲ್ಲಿ ಸರ್ಕಾರಿ, ಸಾರ್ವಜನಿಕ ಆಸ್ತಿ-ಪಾಸ್ತಿಗೆ ನಷ್ಟವುಂಟಾಗುವುದನ್ನು ತಪ್ಪಿಸಲು ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಕ್ರಮ ಕೈಗೊಳ್ಳಲು ಗ್ರಾಮೀಣ ಪೊಲೀಸರು ಸಲ್ಲಿಸಿದ ವರದಿ ಹಿನ್ನೆಲೆ ತಹಸೀಲ್ದಾರ್ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶ ಹೊರಡಿಸಿದ್ದಾರೆ.
ಆದೇಶದಲ್ಲಿ ಜು.20 ರ ಸಂಜೆಯಿಂದ 30ರ ಬೆಳಗ್ಗೆ 8ಗಂಟೆ ವರೆಗೆ ಸಂಗಾಪುರ ಗ್ರಾಮದಲ್ಲಿ ಸಾರ್ವಜನಿಕರು ಹಲವು ಷರತ್ತುಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಿ ತಹಸೀಲ್ದಾರ್ ಮಂಜುನಾಥ ಹತ್ತು ದಿನಗಳ ಕಾಲ ಕಲಂ 144 ಅನ್ವಯ ನಿಷೇಧಾಜ್ಞೆ ಜಾರಿ ಮಾಡಿ ಆದೇಶ ಹೊರಡಿಸಿದ್ದಾರೆ.