ಕರ್ನಾಟಕ

karnataka

ETV Bharat / state

ಮೇಲೇಳಲಾಗದೆ ಮೂರು ಮಕ್ಕಳ ನರಳಾಟ... ಎದೆಯೆತ್ತರ ಬೆಳೆದ ಮಕ್ಕಳ ಸಾಕಲಾಗದೆ ತಾಯಿಗೆ ಸಂಕಟ! - koppala latest news

ಕೊಪ್ಪಳದಲ್ಲಿ ಒಂದೇ ಕುಟುಂಬದ ಮೂವರು ವಯಸ್ಕರು ಮೇಲೇಳಲಾಗದೆ ನರ ದೌರ್ಬಲ್ಯದಿಂದ ಸಂಕಟ ಪಡುತ್ತಿದ್ದು, ತಾಯಿಯೇ ಎಲ್ಲರನ್ನೂ ನೋಡಿಕೊಳ್ಳಬೇಕಿದೆ.

koppala family needed help
ನೆರವು ನೀಡಿ

By

Published : May 13, 2020, 9:55 PM IST

ಕೊಪ್ಪಳ:ಕೆಲ ಸನ್ನಿವೇಶಗಳನ್ನು ನೋಡಿದಾಗ ದೇವರು ಎಷ್ಟೊಂದು ನಿರ್ದಯಿ ಎಂದೆನಿಸಿಬಿಡುತ್ತದೆ. ಇಲ್ಲೊಂದು ಕುಟುಂಬದ ಸ್ಥಿತಿಯನ್ನು ನೋಡಿದರೆ ಈ‌ ಮಾತು ಸತ್ಯ ಅನಿಸುತ್ತದೆ. ಈ ಕುಟುಂಬದ ಕರುಣಾಜನಕ ಕಥೆ ಕೇಳಿದರೆ ಎಂತಹ ಕಲ್ಲು ಹೃದಯವೂ ಮಮ್ಮಲ ಮರುಗುತ್ತದೆ.

ನೆರವು ನೀಡಿ
ಜಿಲ್ಲಾ ಕೇಂದ್ರ ಕೊಪ್ಪಳ ನಗರಕ್ಕೆ ಹೊಂದಿಕೊಂಡಿರುವ ಭಾಗ್ಯನಗರ ಪಟ್ಟಣದಲ್ಲಿ ಕುಟುಂಬವೊಂದಿದೆ. ಈ ಕುಟುಂಬದಲ್ಲಿರುವ ಮೂವರು ಒಬ್ಬರಾದ ಮೇಲೊಬ್ಬರಂತೆ ಸ್ವತಂತ್ರವಾಗಿ ಎದ್ದು ನಿಲ್ಲಲೂ ಆಗದಂತಹ ಸ್ಥಿತಿ ತಲುಪಿದ್ದಾರೆ. ಎದೆಯುದ್ದ ಬೆಳೆದಿರುವ ಮಕ್ಕಳ ಈ ಸ್ಥಿತಿಯನ್ನು ಕಂಡು ಆ ಮಕ್ಕಳ ತಾಯಿ ನಿತ್ಯವೂ ಕಣ್ಣೀರು ಹಾಕುತ್ತಿದ್ದಾಳೆ. ಮೂಲತಃ ಗದಗದವರಾದ ರತ್ನಾಬಾಯಿ ಪವಾರ್, ಭಾಗ್ಯನಗರಕ್ಕೆ ಬಂದು ನೆಲೆಸಿ 11 ವರ್ಷವಾಗಿದೆ. ಸಾವಜಿ ಖಾನಾವಳಿ ಮೂಲಕ ಬದುಕಿನ ಬಂಡಿ ಜಗ್ಗುತ್ತಿದ್ದ ರತ್ನಾಬಾಯಿ ಅವರ ಪತಿ ಕೃಷ್ಣಸಾ ಪವಾರ್ ತೀರಿಹೋಗಿದ್ದಾರೆ.‌ ಇದರಿಂದಾಗಿ ಈ ಕುಟುಂಬದಲ್ಲಿ ದುಡಿಯುವವರು ಯಾರೂ ಇಲ್ಲ. ರತ್ನಾಬಾಯಿ ಅವರ‌ ಮೂರೂ ಮಕ್ಕಳು ಒಬ್ಬರಾದ ಮೇಲೊಬ್ಬರಂತೆ ನಡುವಿನಲ್ಲಿ ಶಕ್ತಿ ಕಳೆದುಕೊಂಡು ಸ್ವತಂತ್ರವಾಗಿ ಮೇಲೇಳದಂತಾಗಿದ್ದಾರೆ. ಮಗಳಾದ ಗಾಯತ್ರಿ, ಗಂಡು ಮಕ್ಕಳಾದ ವಿಠ್ಠಲ ಸಾ ಹಾಗೂ ಶಂಕರ್ ಸಾ ಒಬ್ಬರಾದ‌ ಮೇಲೊಬ್ಬರಂತೆ ಶಕ್ತಿ ಕಳೆದುಕೊಂಡಿದ್ದಾರೆ. ಅವರು ಎದ್ದು ನಿಲ್ಲಬೇಕು ಎಂದರೂ ಒಬ್ಬರ ಆಸರೆ ಬೇಕೇ ಬೇಕು. ಗೋಡೆ ಆಸರೆ ಹಿಡಿದುಕೊಂಡು ಒಂದಿಷ್ಟು ಜಾಗ ಕದಲಿಸುತ್ತಾರೆ. ಆದರೆ, ಇವರ ಎಲ್ಲಾ ನಿತ್ಯ ಕರ್ಮಗಳಿಗೆ ಒಬ್ಬರ ಆಸರೆ ಬೇಕೇ ಬೇಕು. ವೃದ್ಧಾಪ್ಯದಲ್ಲಿಯೂ ರತ್ನಾಬಾಯಿ ಮಕ್ಕಳನ್ನು ಈ ಸ್ಥಿತಿಯಲ್ಲಿ ನೋಡಿಕೊಂಡು ಕಣ್ಣೀರು ಹಾಕುತ್ತಿದ್ದಾರೆ. ಇವರಿಗಿರುವ ಕಾಯಿಲೆಗೆ ಈಗಾಗಲೇ ಬೇರೆ ಬೇರೆ ವೈದ್ಯರ ಕಡೆ ಚಿಕಿತ್ಸೆ ಕೊಡಿಸಿದರೂ ಪ್ರಯೋಜನವಾಗಿಲ್ಲ. ಈಗ ಮನೆಯಲ್ಲಿ ದುಡಿಯುವರು ಇಲ್ಲ, ಮಕ್ಕಳ ಸ್ಥಿತಿಯೂ ಹೀಗೆ. ಹೀಗಾಗಿ ನಮ್ಮ ಬದುಕು ಶೋಚನೀಯವಿದೆ ಎಂದು ಆ ತಾಯಿ ತನ್ನ ಸ್ಥಿತಿಯ ಕುರಿತು ಕಣ್ಣೀರು ಹಾಕ್ತಾರೆ.


ಇನ್ನು ಸಮಾಜದಿಂದ ಈ ಕುಟುಂಬಕ್ಕೆ ಒಂದಿಷ್ಟು ಸಹಾಯ ಮಾಡಲಾಗಿದೆ. ಆದರೆ ಇನ್ನೂ ಹೆಚ್ಚಿನ ಸಹಾಯ ಈ ಕುಟುಂಬಕ್ಕೆ ಬೇಕಿದೆ. ಮಕ್ಕಳ ತಾಯಿಗೂ ವಯಸ್ಸಾಗಿದೆ. ಮುಂದೆ ಇವರನ್ನು ನೋಡಿಕೊಳ್ಳೋರು ಯಾರು? ಈ ಸ್ಥಿತಿಯನ್ನು ನೆನೆಸಿಕೊಂಡರೆ ನಿಜಕ್ಕೂ‌ ಮನ ಕಲಕುತ್ತಿದೆ. ಈ ಮೂವರಲ್ಲಿ ಯಾರಾದರೊಬ್ಬರ ಕಾಯಿಲೆ ವಾಸಿಯಾದರೆ ಆ ಉಳಿದಿಬ್ಬರನ್ನು ನೋಡಿಕೊಳ್ಳಬಹುದು. ಹೀಗಾಗಿ ಯಾರಾದರೂ ದಾನಿಗಳು ಇವರಿಗೆ ಚಿಕಿತ್ಸೆಗೆ ನೆರವು ನೀಡುವಂತೆ ಭಾಗ್ಯನಗರದ ನ್ಯಾಯವಾದಿ ಪರಶುರಾಮ ಪವಾರ್ ಮನವಿ ಮಾಡಿದ್ದಾರೆ. ಸಂಕಷ್ಟದಲ್ಲಿರುವ ಈ ಕುಟುಂಬಕ್ಕೆ ನೆರವು ನೀಡಲು ಬಯಸುವವರು ಇವರ ಬ್ಯಾಂಕ್ ಖಾತೆಗೆ ಹಣ ಜಮೆ ಮಾಡಬಹುದಾಗಿದೆ. ಹೆಚ್ಚಿನ ಮಾಹಿತಿಗೆ ವಿಠಲ್ ಪವಾರ್ ಅವರ ಮೊಬೈಲ್ ನಂಬರ್ 9741291220 ಸಂಖ್ಯೆಗೆ ಸಂಪರ್ಕಿಸಿ ನೆರವು ನೀಡಬಹುದಾಗಿದೆ.

ABOUT THE AUTHOR

...view details