ಕೊಪ್ಪಳ:ಸಾಲಬಾಧೆಯಿಂದ ರೈತನೊಬ್ಬ ತನ್ನ ಜಮೀನಿನಲ್ಲಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೇವೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಯಲಬುರ್ಗಾ ತಾಲೂಕಿನ ಚಿಕ್ಕಮ್ಯಾಗೇರಿಯ ವೀರಪ್ಪ ಚಲವಾದಿ(41) ಆತ್ಮಹತ್ಯೆ ಮಾಡಿಕೊಂಡ ರೈತ. ಮೃತ ರೈತ ಯಲಬುರ್ಗಾದ ಬ್ಯಾಂಕ್ವೊಂದರಲ್ಲಿ 2008 ರಲ್ಲಿ 45 ಸಾವಿರ ಸಾಲ ಪಡೆದಿದ್ದರು. ಸದ್ಯ ಬಡ್ಡಿ ಸೇರಿ ಸಾಲ 80 ಸಾವಿರ ರೂಪಾಯಿ ಆಗಿದೆ. ಈ ವರ್ಷವೂ ಮಳೆ, ಬೆಳೆ ಇಲ್ಲದೆ ನೊಂದಿದ್ದ ರೈತ ಶನಿವಾರ ಸಾವಿನ ಹಾದಿ ಹಿಡಿದಿದ್ದಾನೆ.
ಹುಲಿಯಾಪುರದ ರೈತ ಆತ್ಮಹತ್ಯೆ:ಇತ್ತೀಚಿಗೆ, ಕುಷ್ಟಗಿ ತಾಲೂಕಿನ ಹುಲಿಯಾಪುರದ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದರು. ಕಲ್ಲಪ್ಪ ಕತಿಗೇರಿ(42) ಆತ್ಮಹತ್ಯೆ ಮಾಡಿಕೊಂಡ ರೈತ. ಹಿರೇಮನ್ನಾಪುರದ ಬ್ಯಾಂಕ್ವೊಂದರಲ್ಲಿ 2 ಲಕ್ಷ, ಖಾಸಗಿ ಫೈನಾನ್ಸ್ ಕಂಪನಿಯೊಂದರಿಂದ 1.20 ಲಕ್ಷ ಸಾಲ ಪಡೆದಿದ್ದರು. ಈ ಬಾರಿ ಸರಿಯಾಗಿ ಮಳೆಯಾಗದಿದ್ದರಿಂದ ಎರಡು ಎಕರೆ ಕೃಷಿ ಭೂಮಿ ಹೊಂದಿದ್ದ ಕಲ್ಲಪ್ಪನಿಗೆ ಸಾಲ ತೀರಿಸಲು ಸಾಧ್ಯವಾಗಿರಲಿಲ್ಲ. ಕಳೆದ ಆರು ತಿಂಗಳಿನಿಂದ ಬ್ಯಾಂಕಿನಿಂದ ಸಾಲ ಮರುಪಾವತಿಗಾಗಿ ಮೂರು ನೋಟಿಸ್ ಬಂದಿದ್ದವು. ಇದರಿಂದ ಮನನೊಂದ ರೈತ ಡಿ 24 ರಂದು ಆತ್ಮಹತ್ಯೆಗೆ ಯತ್ನಿಸಿದ್ದ. ಅವರನ್ನು ಗಂಗಾವತಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ರೈತ ಕಲ್ಲಪ್ಪ ಡಿಸೆಂಬರ್ 27 ರಂದು ಮೃತಪಟ್ಟಿದ್ದ.