ಗಂಗಾವತಿ :ಬಹುತೇಕ ಕಳ್ಳತನ ಪ್ರಕರಣಗಳ ಹಿಂದೆ ಒಂದೊಂದು ಕತೆ ಇರುತ್ತದೆ. ಕೆಲವರು ವೃತ್ತಿಯನ್ನಾಗಿಸಿಕೊಂಡರೆ, ಇನ್ನು ಕೆಲವರಿಗೆ ತಮ್ಮ ಅಗತ್ಯತೆಗಳನ್ನು ಪೂರೈಸಿಕೊಳ್ಳಲು ಕಳ್ಳತನಕ್ಕಿಳಿಯುತ್ತಾರೆ. ಅನುಭವ ಇಲ್ಲದವರು ಸಿಕ್ಕಿಬಿದ್ದರೆ, ವೃತ್ತಿಪರರು ಪೊಲೀಸರಿಂದ ಪಾರಾಗುತ್ತಾರೆ. ಕಳ್ಳತನ ಪ್ರಕರಣವೊಂದರ ಹಿಂದೆ ಕರಾಳ ಕೊರೊನಾದ ಕರಿಛಾಯೆ ವ್ಯಾಪಿಸಿರುವುದು ಗೊತ್ತಾಗಿದೆ.
ಎಮ್ಮೆ ಕದ್ದ ಕಳ್ಳರ ಹಿಂದಿದೆ ಕರಾಳ ಕತೆ: ಕಳ್ಳತನಕ್ಕೆ ಕರೆತಂತು ಕೊರೊನಾ
ಲಾಕ್ಡೌನ್ ಬಳಿಕ ಮಾಡಲು ಕೆಲಸ ಇಲ್ಲದೇ ಕಂಗಲಾಗಿದ್ದ ವ್ಯಕ್ತಿಗಳಿಬ್ಬರು ಸಂಚು ಹೂಡಿ ಎಮ್ಮೆಗಳನ್ನು ಕಳ್ಳತನ ಮಾಡಿ ಸಿಕ್ಕಿಬಿದ್ದಿದ್ದಾರೆ.
ನಗರಠಾಣೆಯ ಪೊಲೀಸರು ಎಮ್ಮೆಗಳ ಕಳ್ಳತನದ ಕೇಸಿನಲ್ಲಿ ಬಂಧಿಸಿ ಕರೆತಂದ ಮೂವರು ಆರೋಪಿಗಳ ಪೈಕಿ ಇಬ್ಬರು ಅನಿವಾರ್ಯತೆಗಳ ಪೂರೈಕೆಗೆ ಕಳ್ಳತನಕ್ಕೆ ಇಳಿದಿರುವುದು ಗೊತ್ತಾಗಿದೆ. ಜಂಗಮರ ಕಲ್ಗುಡಿ ಗ್ರಾಮದ ಖಾಸಗಿ ವಾಹನಗಳ ಚಾಲಕ ರಿಜ್ವಾನ್ ಎಂಬ ಆರೋಪಿ ವಾಹನ ಚಾಲನೆ ಜೊತೆಗೆ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದ. ಆದರೆ, ಕೊರೊನಾದ ಲಾಕ್ಡೌನ್ ಬಳಿಕ, ವಾಹನದ ಕಂತು ಕಟ್ಟಲು ಹಾಗೂ ಮನೆಗೆ ತಂದಿದ್ದ ಕಿರಾಣಿ ಸರಕಿನ ಹಣ ಪಾವತಿಸಲಾಗದೇ ಕಳ್ಳತನಕ್ಕಿಳಿದಿದ್ದಾನೆ ಎನ್ನಲಾಗುತ್ತಿದೆ. ಇನ್ನು ಮತ್ತೊಬ್ಬ ಆರೋಪಿ ಕೂಲಿಕಾರ ದಾವೂದ್ನಿ ಎಂಬಾತನಿಗೆ ಇಬ್ಬರು ತಾಯಂದಿರು, ಮನೆಯಲ್ಲಿ 13 ಜನ ಸದಸ್ಯರು!
ಮನೆಯನ್ನು ನಿಭಾಯಿಸುವ ಹೊಣೆ ಹೊತ್ತ ಈತ ಲಾಕ್ಡೌನ್ ಬಳಿಕ ಮಾಡಲು ಕೆಲಸ ಇಲ್ಲದೇ ಕಂಗಲಾಗಿದ್ದ ಎನ್ನಲಾಗಿದೆ. ಹೇಗೋ ಆರೋಪಿಗಳು ಒಬ್ಬರಿಗೊಬ್ಬರು ಸೇರಿ ಸಂಚು ಹೂಡಿ ಎಮ್ಮೆಗಳನ್ನು ಕಳ್ಳತನ ಮಾಡಿ ತಗ್ಲಾಕಿಕೊಂಡಿದ್ದಾರೆ. ಪೊಲೀಸರು ಎಮ್ಮೆಗಳ ಕಳ್ಳತನದ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ಮೂವರನ್ನು ಬಂಧಿಸಿ ಇದೀಗ ಜೈಲಿಗೆ ಅಟ್ಟಿದ್ದಾರೆ.